ಚಿಕ್ಕಬಳ್ಳಾಪುರ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಮೂಲಕ ಕಂದಾಯ ಇಲಾಖೆ ಮತ್ತಷ್ಟು ಜನಸ್ನೇಹಿಯಾಗುತ್ತಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿಯಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಹಲೋ ಕಂದಾಯ ಸಚಿವರೇ ಯೋಜನೆ’ ಮೂಲಕ 72 ಗಂಟೆಗಳ ಒಳಗೆ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಯನ್ನು ಮಂಜೂರು ಮಾಡುವ ವ್ಯವಸ್ಥೆ ಜಾರಿಯಾಗಿದೆ. ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ಯಶಸ್ವಿಯಾಗಿ ತಲುಪಿಸಲಾಗುತ್ತಿದೆ.
ರೈತರು ವ್ಯವಸಾಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದ ದಾಖಲೆರಹಿತ ಜಮೀನುಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ರೈತರನ್ನು ‘ಭೂ ಕಬಳಿಕೆ’ ಹಣೆಪಟ್ಟಿಯಿಂದ ಮುಕ್ತಿಗೊಳಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ಕನಿಷ್ಠ 7 ದಿನಗಳ ಒಳಗೆ ಭೂ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಈ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.
ಸಚಿವ ಡಾ. ಸುಧಾಕರ್, ಎಂ.ಟಿ.ಬಿ ನಾಗರಾಜ್, ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಜಿಲ್ಲಾ ಪಂಚಾಯತ್ ಸಿ.ಇ.ಓ ಪಿ.ಶಿವಶಂಕರ್, ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಆನಂದ ರೆಡ್ಡಿ ಬಾಬು, ಗೌರಿಬಿದನೂರು ತಾಲೂಕು ತಹಸೀಲ್ದಾರ್ ಶ್ರೀನಿವಾಸ್, ಜರಬಂಡಹಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶ್ರೀನಾಥ್ ಬಾಬು, ಗ್ರಾ.ಪಂ ಸದಸ್ಯರು, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.