ಬೆಂಗಳೂರು: ಕುಡುಬಿ ಜನಾಂಗವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸದೃಢಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಶಿಫಾರಸ್ಸಿನೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕುಡುಬಿ ಸಂಘ (ರಿ.) ಪದಾಧಿಕಾರಿಗಳು ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕುಡುಬಿ ಜನಾಂಗದ ಆಚಾರ ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೂಗೋಳಿಕ ಅಂಶಗಳ ಕುರಿತಂತೆ ಅಧ್ಯಯನ ನಡೆಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು ಸೂಕ್ತ ಶಿಫಾರಸ್ಸಿನೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ಪ್ರಸ್ತಾವನೆಯ ಕುರಿತು ಶಾಸಕರು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರಿಗೆ ಸಂಪೂರ್ಣ ವಿವರಗಳೊಂದಿಗೆ ಮನವರಿಕೆ ಮಾಡಿದರು. ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಕರ್ನಾಟಕ ರಾಜ್ಯ ಕುಡುಬಿ ಸಂಘ (ರಿ.) ಇದರ ಅಧ್ಯಕ್ಷರಾದ ಎಂ ಕೆ ನಾಯಕ್, ಕೋಶಾಧಿಕಾರಿ ಗಣಪತಿ ನಾಯಕ್, ಕುಡುಬಿ ಸಂಘ (ರಿ.) ಇದರ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಾರ್ಥ ನಾಯಕ್, ಪದಾಧಿಕಾರಿಗಳಾದ ನರಸಿಂಹ ನಾಯಕ್, ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.