ಬಾಗಲಕೋಟೆ: ಪೂರಕ ಕಾನೂನು ತರಬೇತಿ ಪಡೆದ ಸುಗಮಕಾರರು ಜ್ನಾನವನ್ನು ಸುತ್ತಮುತ್ತಲಿನವರಿಗೆ, ನೊಂದವರಿಗೆ ವರ್ಗಾಯಿಸಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜನಸಾಮಾನ್ಯರಿಗೆ ಕಾನೂನು ಅರಿವಿನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.
ಉಚಿತ ಸಲಹೆ, ನ್ಯಾಯ ಪಡೆಯಲು ವಕೀಲರ ಸೇವೆಯನ್ನು ಉಚಿತವಾಗಿ ನೀಡುತ್ತದೆ. ಅಲ್ಲದೆ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸುತ್ತಿದೆ, ಲೋಕ ಅದಾಲತ್‌ಗಳ ಮೂಲಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಲು ಶ್ರಮಿಸುತ್ತಿದೆ.
ಮಕ್ಕಳು, ಮಹಿಳೆಯರು, ಪ್ರವಾಹಪೀಡಿತರು, ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವವರು ನ್ಯಾಯಾಲಯಕ್ಕೆ ಬಂದು ಉಚಿತ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಹೇಮಾ ಪಸ್ತಾಪೂರ ಹೇಳಿದರು.
ಅವರು ಬಾಗಲಕೋಟೆಯ ಅಕ್ಷಯ ಸಭಾಂಗಣದಲ್ಲಿ ನಡೆದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡೀಡ್ಸ್ ಮಂಗಳೂರು ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪ್ರತಿ ಮನೆಯಲ್ಲಿ ಮಹಿಳೆಯರು ತಾರತಮ್ಯ, ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ.
ಹೆಚ್ಚಿನ ಮಹಿಳೆಯರಿಗೆ ಇದು ಹಿಂಸೆ ಎಂದು ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸೆ, ಬಾಲ್ಯವಿವಾಹ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಜಾಸ್ತಿಯಾಗುತ್ತಿವೆ. ಇವು ಅಪರಾಧ ಅನ್ನುವ ಜಾಗೃತಿಯನ್ನು ಜನರಲ್ಲಿ ಬೆಳೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ 12 ದಿನಗಳ ಲಿಂಗತ್ವ ಮಹಿಳಾ ಕಾನೂನುಗಳು, ಮಹಿಳಾ ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿ ಪೂರಕ ಕಾನೂನು ತರಬೇತಿ ನಡೆಸಿದ್ದೇವೆ.
ಈ ಪೂರಕ ಕಾನೂನು ಸುಗಮಕಾರರ ಮೂಲಕ ಪ್ರತಿ ಹಂತದಲ್ಲಿ ಹಳ್ಳಿಗಳ 2000 ಮಂದಿಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಿದೆವು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ ಎಚ್, ಮಾತನಾಡುತ್ತಾ, ಕೌಟುಂಬಿಕ ಹಿಂಸೆ, ಲೈಂಗಿಕ ಅಪರಾಧಗಳನ್ನು ತಡೆಯಲು ಮತ್ತು ನೊಂದವರಿಗೆ ಸಾಂತ್ವನ- ನ್ಯಾಯ ಸೌಲಭ್ಯಗಳನ್ನು ಒದಗಿಸಲು ರಕ್ಷಣಾಧಿಕಾರಿ, ಸಾಂತ್ವನ, ಸಖಿ ಕೇಂದ್ರಗಳಿವೆ.
ಇಲಾಖೆಯ ಪ್ರತೀ ತಾಲೂಕುಗಳಲ್ಲಿ ಪ್ರಾಧಿಕಾರದ ಒಬ್ಬ ವಕೀಲರು ಉಚಿತವಾಗಿ ಲಭ್ಯವಿದ್ದು ಅವರು ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಮಾರ್ಗದರ್ಶನ ಮಾಡುತ್ತಾರೆ.
ಸಖಿ ಕೇಂದ್ರದಲ್ಲಿ ವೈದ್ಯರು, ವಕೀಲರು, ಪೊಲೀಸರು, ಸಮಾಲೋಚಕರು ಉಚಿತವಾಗಿ ಲಭ್ಯವಿದ್ದು ನೊಂದ ಮಹಿಳೆಯರಿಗೆ ಸಾಂತ್ವನ, ಮಾರ್ಗದರ್ಶನ ಮಾಡುತ್ತಿದ್ದಾರೆ. ಸಂಘಸಂಸ್ಥೆಗಳು, ವ್ಯಕ್ತಿಗಳು, ಇಲಾಖೆಗಳು ಒಟ್ಟಿಗೆ ಸೇರಿ ಕೆಲಸ ಮಾಡಿದಾಗ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಬಾಗಲಕೋಟೆ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯದ ಅಧ್ಯಕ್ಷರಾದ ಬೀಬಿಜಾನ್ ಗಲಗಲಿ ಉಪಸ್ಥಿತರಿದ್ದರು. ಆಯ್ದ ಪೂರಕ ಕಾನೂನು ಸುಗಮಕಾರರು, ತಳಮಟ್ಟದ ಮಾಹಿತಿ ಕಾರ್ಯಕ್ರಮದ ಭಾಗಾರ್ಥಿಗಳು ಡೀಡ್ಸ್ ವತಿಯಿಂದ ನಡೆದ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮಗಳಿಂದ ತಮಗಾದ ಪ್ರಯೋಜನ, ಮಾಡಿದ ಬದಲಾವಣೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೂರಕ ಕಾನೂನು ಸುಗಮಕಾರರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮವು ಡೀಡ್ಸ್ ಮಂಗಳೂರು, ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ, ಬಾಗಲಕೋಟೆ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯ ಮತ್ತು ಸಹಭಾಗಿ ಸ್ವಯಂ ಸೇವಾ ಸಂಸ್ಥೆಗಳು ಬಾಗಲಕೋಟೆ ಸಹಭಾಗಿತ್ವದಲ್ಲಿ ನಡೆಯಿತು.
ಸುಗಮಕಾರರಾದ ಲತಾ ತಿಪ್ಪ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಪ್ಪಡ್ಲಿ ಆಶಯ ಗೀತೆ ಹಾಡಿದರು. ಹಸೀನಾ ವಾಲಿಕಾರ ಸ್ವಾಗತಿಸಿ, ಮೋದಿನ್‌ಸಾಬ್ ವಾಲಿಕಾರ ವಂದಿಸಿದರು.