ಮಂಗಳೂರು, ಜೂನ್ 18: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ನಿರ್ಧಾರವನ್ನೂ ರಾಜಕೀಯ ದ್ವೇಷದಿಂದಲೇ ಮಾಡುತ್ತಿದ್ದು, ಇದೀಗ ಪಠ್ಯ ಪರಿಷ್ಕರಣೆ ಮಾಡುವ ಮೂಲಕ ದೇಶದ ಸಾಮಾಜಿಕ ಹರಿಕಾರರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಪ್ರತಿಕ್ರಯಿಸಿದ್ದಾರೆ.
ಶಿಕ್ಷಣ ಕ್ಷೆತ್ರವು ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು ಎಂಬ ದೃಷ್ಟಿಕೋನದಿಂದ ಬಿಜೆಪಿ ಸರಕಾರದ ಅವಧಿಯಲ್ಲಿ ಅನಗತ್ಯ ವಿಚಾರಗಳನ್ನು ಕೈಬಿಟ್ಟು ಒಳ್ಳೆಯ ವಿಚಾರಗಳನ್ನು ಪಠ್ಯಕ್ಕೆ ಸೇರಿಸಲಾಗಿತ್ತು. ಆದರೆ ದೇಶಪ್ರೇಮದ ಬಗ್ಗೆ ಒಲವಿಲ್ಲದ ಕಾಂಗ್ರೆಸ್ ಗೆ ಇದನ್ನು ಸಹಿಸಲು ಸಾಧ್ಯವಾಗದೆ ಇದೀಗ ಪಠ್ಯ ಪರಿಷ್ಕರಣೆಗೆ ಕೈ ಹಾಕಿದ್ದಾರೆ ಎಂದು ದೂರಿದರು.
‘ಭಾರತ ಮಾತೆಯ ಅಮೃತ ಪುತ್ರರು’ ಎಂಬ ಸೂಲಿಬೆಲೆ ಅವರ ಪಠ್ಯ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ವಿಷಯವಾಗಿತ್ತು. ಸಾವರ್ಕರ್, ಸುಖದೇವ್, ಭಗತ್‍ಸಿಂಗ್ ಅವರ ಸ್ವಾತಂತ್ರ್ಯ ಹೋರಾಟ, ಜೀವನ ಕಥನಗಳನ್ನು ಮಕ್ಕಳಿಗೆ ತಿಳಿಸುವ ಪಠ್ಯವಾಗಿತ್ತು. ಇನ್ನು `ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಎಂಬ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣದ ಪಠ್ಯ ಅಳವಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅದರಲ್ಲೂ ರಾಜಕೀಯ ಹುಡುಕಿ, ಈ ವಿಷಯಗಳಿಗೆ ಕತ್ತರಿ ಹಾಕಿ ಮಕ್ಕಳ ಪಠ್ಯಲ್ಲಿ ಕಾಂಗ್ರೆಸ್ ಮನಸ್ಥಿತಿಯ ವಿಚಾರಧಾರೆಗಳನ್ನು ತುರುಕಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಕ್ಷೆತ್ರದಲ್ಲಿ ಸಮಗ್ರವಾಗಿ ಅವಲೋಕನ ಮಾಡದೆ, ಸಾಧಕ ಬಾಧಕ ಅಧ್ಯಯನ ಮಾಡದೆ, ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹ ಪೀಡಿತರಾಗಿ ಪಠ್ಯಪರಿಷ್ಕರಣೆ ಮಾಡುತ್ತಿರುವುದು ಖಂಡನೀಯ. ನಮ್ಮ ಅವಧಿಯಲ್ಲಿ ಮೊದಲಿನ ತಪ್ಪುಗಳನ್ನು ತಿದ್ದುವ ಕೆಲಸವಾಗಿತ್ತು. ಈಗ ಬಿಜೆಪಿ, ಆರೆಸ್ಸೆಸ್ ಮೇಲಿನ ದ್ವೇಷದಿಂದ ಪಠ್ಯ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಸಮಗ್ರವಾಗಿ ವಿಮರ್ಶಿಸಿ ಮಾಡಬೇಕಿತ್ತು. ಆದರೆ ರಾಜಕೀಯ ಕಾರಣಕ್ಕೋಸ್ಕರ ಬದಲಾವಣೆ ಮಾಡುವುದು ಅಕ್ಷ್ಯಮ್ಯ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.