ಚಿಕ್ಕನಾಯಕನಹಳ್ಳಿ: ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಸಮಾಜಕಾರ್ಯ ವಿಭಾಗದ ಗ್ರಾಮೀಣ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭ ಇಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಜ್ರದ ಶ್ರೀ ತೀರ್ಥರಾಮೇಶ್ವರ ದಾಸೋಹ ಭವನದಲ್ಲಿ ನಡೆಯಿತು.
ಪತ್ರಕರ್ತರ ಸಂಘ ಚಿಕ್ಕನಾಯಕನಹಳ್ಳಿ ಅಧ್ಯಕ್ಷರಾದ ಮಹೇಶ್ ರಂಗನಕೆರೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯುವಜನರು ಗ್ರಾಮೀಣ ಸಂಸ್ಕೃತಿಯನ್ನು ಅರಿತುಕೊಂಡು ಬೆಳೆಸುವ ಅವಶ್ಯಕತೆಯಿದೆ. ಗ್ರಾಮೀಣ ಜನರಲ್ಲಿ ಬೇರೂರಿರುವ ಸೌಹಾರ್ದತೆ, ಪರಿಸರ ಪ್ರೇಮ ಮತ್ತು ಕೃಷಿ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿಕೊಂಡರೆ ಗ್ರಾಮೀಣಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಇಟ್ಟು ಗುರಿಯನ್ನು ಯೋಗ್ಯ ರೀತಿಯಲ್ಲಿ ಸಾಧಿಸಲು ಮುಂದಾಗಬೇಕು. ದೇಶದ ಬೆನ್ನೆಲುಬಾದ ಕೃಷಿಯತ್ತ ಯುವಜನರ ಆಕರ್ಷಣೆ ಮತ್ತಷ್ಟು ಹೆಚ್ಚಾಗಬೇಕಾದರೆ ಸಮಾಜಕಾರ್ಯ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ತೀರ್ಥಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಣುಕಮ್ಮ, , ರಾಮಪುರ ವಜ್ರ ಕ್ಷೇತ್ರದ ಪುರೋಹಿತರಾದ ಪ್ರಕಾಶ್ ಶಾಸ್ತ್ರಿ, ಶಿಬಿರಾಧಿಕಾರಿಗಳಾದ ಅರುಣಾ ಕುಮಾರಿ, ಫಿರ್ದೋಸ್ ತೋನ್ಸೆ, ಲಕ್ಷ್ಮೀಶ್ ಸಿ. ಆರ್., ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಹರ್ಷಿತ ಸ್ವಾಗತಿಸಿ, ಜ್ಞಾನೇಶ್ವರಿ ವಂದಿಸಿದರು. ಮಂಜೂಷ ಕೆ ಕಾರ್ಯಕ್ರಮ ನಿರೂಪಿಸಿದರು.