Wednesday, January 22, 2025
Wednesday, January 22, 2025

ಕರ್ನಾಟಕ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ

ಕರ್ನಾಟಕ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ

Date:

ಉಡುಪಿ, ಅ.3: ಭಾರತ ಚುನಾವಣಾ ಆಯೋಗವು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕುಗಳು), ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು, ಆಯಾ ಉಪವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಿದ್ದು, ಅರ್ಹತಾ ದಿನಾಂಕ 2023 ರ ನವೆಂಬರ್ 1 ಕ್ಕೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿರುತ್ತದೆ. ಭಾರತ ಚುನಾವಣಾ ಆಯೋಗವು, ಕರ್ನಾಟಕ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ದಪಡಿಸುತ್ತಿದ್ದು, ಈ ಹಿಂದಿನ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಸಹ ನಮೂನೆ 18 ರಲ್ಲಿ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ನಮೂನೆ 19 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಈ ಕೆಳಗಿನಂತೆ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ. ಪದವೀಧರರ ಕ್ಷೇತ್ರದ ಮತದಾರರ ಅರ್ಜಿ ನಮೂನೆ 18 ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಅರ್ಜಿ ನಮೂನೆ 19 ರಲ್ಲಿ ಅರ್ಜಿಯನ್ನು ಸ್ವೀಕರಿಸಲು ನವೆಂಬರ್ 6 ಕೊನೆಯ ದಿನ, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 23 ರಂದು ಪ್ರಕಟಿಸಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 23 ರಿಂದ ಡಿಸೆಂಬರ್ 9 ರ ಒಳಗೆ ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು.

ಪದವೀಧರರ ಕ್ಷೇತ್ರದ ಮತದಾರರ ಮಾರ್ಗಸೂಚಿಗಳು: ಅರ್ಹ ಪದವೀಧರರು ಮೂಲ ಪ್ರಮಾಣ ಪತ್ರ ಮತ್ತು ಅದರ ಪ್ರತಿಯನ್ನು ಸ್ವಯಂ ದೃಢೀಕರಿಸಿಕೊಂಡು, ಗೊತ್ತುಪಡಿಸಿದ ಅಧಿಕಾರಿಯ ಮುಂದೆ ಖುದ್ದು ಹಾಜರಾಗಿ ಅವರಿಂದ ದೃಢೀಕರಿಸಿಕೊಂಡು ಅವರಲ್ಲಿಯೇ ಅರ್ಜಿಯನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ವ್ಯಕ್ತಿಯು ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಿದ್ದು, ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಕರ್ನಾಟಕ ನೈರುತ್ಯ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ತಹಶೀಲ್ದಾರ್ ಕಾರ್ಯಾಲಯ) ನಿಗಧಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬೇಕು. ಬಲ್ಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆಯೋಗವು ಮುಂದಿನ ದಿನಗಳಲ್ಲಿ ಸದರಿ ನಮೂನೆ 18 ರ ಅರ್ಜಿಗಳನ್ನು ಇ.ಆರ್.ಎಮ್.ಎಸ್ ನಲ್ಲಿ ಅಳವಡಿಸಲು ಉದ್ದೇಶಿಸಿರುತ್ತಾರೆ.

ಕರ್ನಾಟಕ ನೈರುತ್ಯ ಶಿಕ್ಷಕರ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಇರುವ ಮಾರ್ಗಸೂಚಿಗಳು: ಭಾರತದ ಪುಜೆಯಾಗಿರುವ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು 2023 ರ ನವೆಂಬರ್ 1 ಕ್ಕೆ ಮೊದಲು ಅರು ವರ್ಷದ ಅವಧಿಯಲ್ಲಿ ಕನಿಷ್ಠ ಒಟ್ಟು ಮೂರು ವರ್ಷಗಳಷ್ಟು ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಯಾವುದೇ ವ್ಯಕ್ತಿಯು ನಮೂನೆ-19 ರಲ್ಲಿ ಅರ್ಜಿಯನ್ನು ಸಲ್ಲಿಸಿ, ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿಯು ಭೋದನಾ ವೃತ್ತಿಯಲ್ಲಿ ನಿರತನಾಗಿರದಿದ್ದಲ್ಲಿ, ಪ್ರಮಾಣ ಪತ್ರವನ್ನು ಅಂತಹ ವ್ಯಕ್ತಿಯು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿರಬೇಕು. ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾರೆಯಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ-19 ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಬೇಕು. ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವಂತಹ ಅಥವಾ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮದಂತೆ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುವುದು.

ನಮೂನೆ-19 ರಲ್ಲಿನ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿ/ ನಿಯೋಜಿತ ಅಧಿಕಾರಿಗಳವರ ಕಛೇರಿಯಿಂದ ಪಡೆಯಬಹುದಾಗಿದ್ದು, ಕೈಬರಹದ, ಬೆರಳಚ್ಚು ಮಾಡಿದ ಅಥವಾ ಖಾಸಗಿಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು. ನಮೂನೆ -19 ರ ಅರ್ಜಿಗಳನ್ನು ಬಲ್ಕ್ ಸ್ವೀಕರಿಸಲಾಗುವುದಿಲ್ಲ ಎಂದು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!