ಬೆಳಗಾವಿ: ಐತಿಹಾಸಿಕ ಹಂಪಿ ಉತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ. ಜನವರಿ 27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಭೆಯ ನಂತರ ಮಾಹಿತಿ ನೀಡಿದರು.
ಮೈಸೂರು ದಸರಾ ಮಾದರಿಯಲ್ಲೇ ಹಂಪಿ, ಕಮಲಾಪುರ, ಹೊಸಪೇಟೆಯಲ್ಲಿ ದೀಪಾಲಂಕಾರ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಹೆಲಿಕಾಪ್ಟರ್ ರೈಡ್, ತುಂಗಾ ಆರತಿ, ಸಾಂಸ್ಕೃತಿಕ ಸಂಜೆ, ಹಂಪಿ ಬೈ ಸ್ಕೈ, ಗ್ರಾಮೀಣ ಕ್ರೀಡೆಗಳ ಜೊತೆಗೆ ತುಂಗಭದ್ರಾ ನದಿಯಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ.
ಹಂಪಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ವಿಶ್ವವಿಖ್ಯಾತ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ಮಹಾನವಮಿ ದಿಬ್ಬ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.