ಬೆಳಗಾವಿ, ಡಿ.16: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿಪಡಿಸಲು ಏಕಗವಾಕ್ಷಿ ಏಜೆನ್ಸಿ ವತಿಯಿಂದ ಅನುಮೋದನೆ ಪಡೆದು ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ವ್ಯವಹರಣಾ ಸಮಾಲೋಚಕರನ್ನಾಗಿ ನೇಮಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ರಾಜೇಗೌಡ ಟಿ.ಟಿ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವರ ಪರವಾಗಿ ಸಚಿವರಾದ ರಾಮಲಿಂಗಾರೆಡ್ಡಿ ಉತ್ತರಿಸಿದರು.
ಸ್ಪೈಸ್ ಪಾರ್ಕ್ ಅಭಿವೃದ್ಧಿಗೆ ಗುರುತಿಸಲಾಗಿದ್ದ ಜಾಗದ ಭೌತಿಕ ಪರಿಶೀಲನೆಯನ್ನು ಸಾಂಬಾರು ಮಂಡಳಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಕೈಗೊಂಡಾಗ, ಸದರಿ ಜಾಗವು ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಸೂಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಸೂಕ್ತವಾದ ಪರ್ಯಾಯ ಜಾಗವನ್ನು ನೀಡಲು ಕೋರಲಾಗಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಬೆಟ್ಟದಮನೆ ಗ್ರಾಮದಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ ಉದ್ದೇಶಕ್ಕಾಗಿ ತೋಟಗಾರಿಕೆ ಇಲಾಖೆಗೆ ಭೂಮಿ ವರ್ಗಾಯಿಸಿ, ದಿನಾಂಕ 30-5-2025ರಂದು ಆದೇಶ ಹೊರಡಿಸಲಾಗಿದೆ.
ಜಮೀನಿನ ಹದ್ದುಬಸ್ತು ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ವ್ಯವಹರಣಾ ಸಮಾಲೋಚಕರನ್ನು ನೇಮಿಸಿ ವರದಿಯನ್ನು ಸಿದ್ದಪಡಿಸಲು ಸೂಚಿಸಲಾಗಿರುತ್ತದೆ. ವರದಿ ಬಂದ ಕೂಡಲೇ ಆದಷ್ಟು ಶೀಘ್ರವಾಗಿ ಸ್ಪೈಸ್ ಪಾರ್ಕ್ ಕಾರ್ಯಾರಂಭಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.




By
ForthFocus™