ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 8 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ. ನೇರವಾಗಿ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ 7 ಮಿಲಿಯನ್ ಜನರು ಸಾವೀಗೀಡಾಗುತ್ತಾರೆ. ಭಾರತದಲ್ಲಿ ಪ್ರತಿ ದಿನ 3500 ಸಾವುಗಳು ತಂಬಾಕು ಉತ್ಪನ್ನಗಳ ಬಳಕೆಯಿಂದ ಸಂಭವಿಸುತ್ತದೆ. ಭಾರತದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು 26.7 ಕೋಟಿ (28.6%) ಜನರು ತಂಬಾಕು ಉತ್ಪನ್ನಗಳ ಬಳಕೆಯನ್ನು ಮಾಡುತ್ತಾರೆ. 1.2 ಮಿಲಿಯನ್ ಜನರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಾರೆ. ವಿಶ್ವಾದಾದ್ಯಂತ ಪ್ರತಿ ವರ್ಷ 9 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ, ದೀರ್ಘಕಾಲದ ಶ್ವಾಶಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಪಾರ್ಶ್ವವಾಯು, ಬಂಜೆತನ, ಕುರುಡುತನ, ಕ್ಷಯ ಮತ್ತು ಬಾಯಿ ಕ್ಯಾನ್ಸರ್ ಇತ್ಯಾದಿ ಅಪಾಯಕಾರಿ ಕಾಯಿಲೆಗೆ ತುತ್ತಾಗಿ ಸಾವೀಗೀಡಾಗುತ್ತಾರೆ.
ನಿಮ್ಮನ್ನು ಮತ್ತು ಇತರರನ್ನು ಕೋವಿಡ್-19 ನಿಂದ ರಕ್ಷಿಸಿ. ತಂಬಾಕು ಉತ್ಪನ್ನಗಳನ್ನು ಅಗಿಯುವುದು ಮತ್ತು ಉಗುಳುವುದರಿಂದ ಕೋವಿಡ್19 ಸೋಂಕನ್ನು ಇತರರಿಗೆ ಹರಡುವಂತೆ ಮಾಡಬಹುದು. ಧೂಮಪಾನವು ನಿಮ್ಮ ಶ್ವಾಸಕೋಶ ಮತ್ತು ಇತರೆ ಅಂಗಗಳನ್ನು ಹಾನಿಗೊಳಿಸಿ, ಕೋವಿಡ್-19 ಕಾರಣದಿಂದಾಗಿ ಹೆಚ್ಚಿನ ಅಪಾಯನ್ನುಂಟು ಮಾಡಬಹುದು. ಧೂಮಪಾನ ಮಾಡುವಾಗ ನಿಮ್ಮ ಕೈಯಿಂದ ಬಾಯಿಗೆ ಕೋವಿಡ್-19 ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.
ಈ ವರ್ಷದ “ವಿಶ್ವ ತಂಬಾಕು ರಹಿತ” ದಿನದ ಘೋಷ ವಾಕ್ಯ “ತ್ಯಜಿಸಲು ಸಿದ್ದರಾಗಿ” ಎಂಬುದಾಗಿದ್ದು ಅದರಂತೆ ಸಾರ್ವಜನಿಕರು ತಂಬಾಕು ಬಿಡಲು ದೃಢ ನಿರ್ಧಾರ ಮಾಡಬೇಕಾಗಿದ್ದು ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ 2014 ರಲ್ಲಿ ಉಡುಪಿ ಜಿಲ್ಲೆಯನ್ನು ಕೋಟ್ಪಾ 2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸಲಾಗಿತ್ತು. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪೋಲಿಸ್, ಆರೋಗ್ಯ, ಶಿಕ್ಷಣ, ಅಬಕಾರಿ, ನಗರಸಭೆ ಹಾಗೂ ಕಂದಾಯ ಇಲಾಖೆಗಳನ್ನೊಳಗೊಂಡ “ತಂಬಾಕು ನಿಯಂತ್ರಣ ಕಮಿಟಿ” ರಚನೆಯಾಗಿದ್ದು ಜಿಲ್ಲೆಯಲ್ಲಿ ಕೋಟ್ಪಾ 2003 ದಾಳಿಯನ್ನು ನಿರಂತರವಾಗಿ ಹಮ್ಮಿಕೊಳ್ಳುವುದರ ಮೂಲಕ 2017 ರಿಂದ ಇಲ್ಲಿಯವರೆಗೆ ಸುಮಾರು 6284 ಪ್ರಕರಣಗಳು ಹಾಗೂ ರೂ. 8,79,995 ದಂಡ ವಸೂಲಾಗಿರುತ್ತದೆ. ಇದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ವಿವಿದ ಕಾರ್ಯಕ್ರಮಗಳನ್ನು ಸಹ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ನಿರಂತರವಾಗಿ ಮಾಡಲಾಗುತ್ತಿದೆ.
ಜಿಲ್ಲೆಯ ಜನತೆಗೆ ತಂಬಾಕು ವ್ಯಸನದಿಂದ ಹೊರಬರಲು ಜಿಲ್ಲಾಸ್ಪತ್ರೆ ಉಡುಪಿ (ಕೊಠಡಿ ಸಂಖ್ಯೆ:22) ರಲ್ಲಿ “ತಂಬಾಕು ವ್ಯಸನ ಮುಕ್ತ ಕೇಂದ್ರದ” ವ್ಯವಸ್ಥೆ ಇದ್ದು ಸಾರ್ವಜಿನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.