ಕುಂದಾಪುರ: ಮಹಿಳಾ ಜೇಸಿಐ ಶಂಕರನಾರಾಯಣ, ಜೇಸಿಐ ಶಂಕರನಾರಾಯಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಲಾಡಿ ವಲಯ, ಗ್ರಾಮ ಪಂಚಾಯತ್ ಹಾಲಾಡಿ, ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು ಮಾಹಿತಿ ಮತ್ತು ಸನ್ಮಾನ ಕಾರ್ಯಕ್ರಮವು ಹಾಲಾಡಿ ಗ್ರಾಮ ಪಂಚಾಯತ್‌ನ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಜೇಸಿಐನ ಅಧ್ಯಕ್ಷೆ ಚೈತ್ರ ಪಿ. ಶೆಟ್ಟಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕುಂದಾಪುರದ ವಕೀಲೆ ಚಂದ್ರಿಕಾ ರವರು ಉಪಸ್ಥಿತರಿದ್ದು, ಕಾನೂನು ಅರಿವು ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಲಾಡಿ ವಲಯದ ಮೇಲ್ವಿಚಾರಕರಾದ ಸಂತೋಷ ನಾಯ್ಕ, ಜೇಸಿಐ ಶಂಕರನಾರಾಯಣ ನಿರಂತರವಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಂಸ್ಥೆಯು ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾದು ವೇದಿಕೆಯಲ್ಲಿ ಶುಭ ಹಾರೈಸಿದರು. ಜೇಸಿಐ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಶಾಡಿಗುಂಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವಲಯ 15 ರ ವಲಯಾಧಿಕಾರಿ ರತೀಶ್ ಕನ್ನಂತ ಮಹಿಳಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಪ್ರವೀಣ ನಾಯ್ಕ ಬಾಳೆಕೊಡ್ಲು, ಕಾರ್ಯಕ್ರಮ ನಿರ್ದೆಶಕರಾದ ಪ್ರಭಾ ಎಸ್. ಶೇಟ್, ಜೇಜೆಸಿ ಅಧ್ಯಕ್ಷೆ ನಿಶ್ಮಿತಾ ತಲ್ಲಂಜೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ಹಾಗೂ ಹಿರಿಯ ಮಹಿಳಾ ಮೀನು ವ್ಯಾಪಾರಿಗಳಾದ ಸುಶೀಲಾ ಬಾಯಿ ಹಾಗೂ ಗುಲಾಬಿ ಮುದೂರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರದಲ್ಲಿ ಉಪಸ್ಥಿತರಿದ್ದ ಮಹಿಳೆಯರಲ್ಲಿ ಅತೀ ಹೆಚ್ಚು ಗಾಜಿನ ಬಳೆ ಧರಿಸಿದ ಮಹಿಳೆ ಸುಶೀಲರವರನ್ನು ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಂತ್ ಮತ್ತು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಲಾಡಿ ವಲಯದ ಸಿಬ್ಬಂದಿಯವರು, ಹಾಲಾಡಿ ಪಂಚಾಯತ್ ಕಛೇರಿ ಸಿಬ್ಬಂದಿ, ಸಂಜೀವಿನಿ ಸ್ವಸಹಾಯ ಸಂಘದ ಸಿಬ್ಬಂದಿ, ಜೇಸಿಐನ ಪೂರ್ವಾಧ್ಯಕ್ಷರುಗಳಾದ ರೇಖಾ ಪ್ರಭಾಕರ್, ಅನಂತಪದ್ಮನಾಭ ಶೆಟ್ಟಿ, ಗುರುದತ್ತ ಶೇಟ್, ಸದಸ್ಯರುಗಳಾದ ಪಲ್ಲವಿ ಪ್ರವೀಣ, ಸರ್ವೋತ್ತಮ ಶೆಟ್ಟಿ, ಪೂರ್ಣಿಮಾ ಉದಯ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷೆ ಚೈತ್ರಾ ಪಿ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ ನಾಯ್ಕ ಬಾಳೆಕೊಡ್ಲು ವಂದಿಸಿದರು. ಪೂರ್ವಾಧ್ಯಕ್ಷೆ ರೇಖಾ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.