Home ಸುದ್ಧಿಗಳು ಪ್ರಾದೇಶಿಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ವೈದ್ಯರಿಂದ ರೋಗನಿರೋಧಕ ಅಸ್ವಸ್ಥತೆಗೆ ಯಶಸ್ವಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ವೈದ್ಯರಿಂದ ರೋಗನಿರೋಧಕ ಅಸ್ವಸ್ಥತೆಗೆ ಯಶಸ್ವಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ

464
0

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ವೈದ್ಯರ ತಂಡವು ರೋಗನಿರೋಧಕ ಅಸ್ವಸ್ಥತೆ (ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್) ಯಿಂದ ಬಳಲುತ್ತಿದ್ದ ಬಾಲಕಿಗೆ ಕರಾವಳಿಯಲ್ಲೇ  ಮೊದಲ ಬಾರಿಗೆ ಯಶಸ್ವಿಯಾಗಿ  ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ ನಿರ್ವಹಿಸಿದೆ.

ಚಿತ್ರದುರ್ಗದ ಎರಡೂವರೆ ವರ್ಷದ ಬಾಲಕಿ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯ ತೊಂದರೆಯಿಂದ ಬಳಲುತ್ತಿದ್ದಳು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆ ತಂದಿದ್ದರು. ಕೆಲವು ವರ್ಷಗಳ ಹಿಂದೆ ಇಂತದೇ ವೈದ್ಯಕೀಯ ತೊಂದರೆಗಳಿಂದ ಅವಳು ತನ್ನ ಸಹೋದರನನ್ನು ಕಳೆದುಕೊಂಡಿದ್ದಳು. ದೀರ್ಘ ತಪಾಸಣೆ ಮತ್ತು ರೋಗ ಮೌಲ್ಯಮಾಪನದ ನಂತರ, ಆಕೆಗೆ ರೋಗನಿರೋಧಕ ಅಸ್ವಸ್ಥತೆ (ಇಮ್ಯೂನ್ ಡಿಸಾರ್ಡರ್) ಇರುವುದು ಪತ್ತೆಯಾಯಿತು ಮತ್ತು ಅಸ್ಥಿಮಜ್ಜೆಯ ಕಸಿ ಮಾತ್ರ ಅವಳಿಗೆ ರೋಗ ಗುಣಪಡಿಸುವ ಚಿಕಿತ್ಸೆಯ ಆಯ್ಕೆಯಾಗಿತ್ತು. ಅದೃಷ್ಟವಶಾತ್, ಅಸ್ಥಿಮಜ್ಜೆಯ ಕಸಿಗೆ ಆಕೆಯ ತಂದೆ 10/10 ಎಚ್ ಎಲ್ ಎ ಹೊಂದಾಣಿಕೆಯಾಗಿದ್ದರು. ಆದ್ದರಿಂದ ದಾನಿಯಾಗಿ ಆಯ್ಕೆಯಾದರು.

ಆಕೆಗೆ ಅಸ್ಥಿಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ. ವಾಸುದೇವ ಭಟ್ ಕೆ ನೇತೃತ್ವದಲ್ಲಿ ಕಸಿಯನ್ನು ನಡೆಸಲಾಯಿತು. ಡಾ. ಅರ್ಚನಾ ಎಂ.ವಿ, ಡಾ. ಕಲಶೇಖರ್, ಡಾ. ರಮಿತಾ ಆರ್.ಭಟ್, ಮತ್ತು ಡಾ. ಅತುಲ್ ಅಚ್ಯುತರಾವ್ ತಂಡದಲ್ಲಿದ್ದರು. ಡಾ. ಶಮೀ ಶಾಸ್ತ್ರಿ ನೇತೃತ್ವದ ರಕ್ತನಿಧಿಯ ವೈದ್ಯರ ತಂಡವು ಅಸ್ಥಿಮಜ್ಜೆಯ ಕಸಿಗೆ ಸಹಕರಿಸಿತು. ಕುಟುಂಬವು ಚಿಕಿತ್ಸೆಗಾಗಿ ಸಾಕಷ್ಟು ಹಣಕಾಸಿನ ಸಮಸ್ಯೆಗಳನ್ನು ಹೊಂದಿತ್ತು ಮತ್ತು ಅನೇಕ ದಾನಿಗಳು, ಸರ್ಕಾರೇತರ ಸಂಸ್ಥೆಗಳು ಮುಖ್ಯವಾಗಿ “ಸೇವ್ ಎ ಲೈಫ್” ಚಾರಿಟಬಲ್ ಟ್ರಸ್ಟ್‌ ಈ ನಿಟ್ಟಿನಲ್ಲಿ ಸಹಾಯ ಮಾಡಿತು.

ಬಾಲಕಿಯು ಕಸಿಯ ನಂತರ ನಿಯಮಿತವಾಗಿ ಆಸ್ಪತ್ರೆಗೆ ಬರುತ್ತಿದ್ದರು. ಪ್ರಸ್ತುತ ಒಂದು ವರ್ಷದ ಫಾಲೋ-ಅಪ್ ಅನ್ನು ಪೂರ್ಣಗೊಳಿಸಿದ್ದಾರೆ. ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶಾಲೆಗೆ ದಾಖಲಾಗಿದ್ದಾರೆ. ಕೆಎಂಸಿ ಮಣಿಪಾಲದ ಮಕ್ಕಳ ಅಸ್ಥಿಮಜ್ಜೆ ಕಸಿ ವೈದ್ಯ ಡಾ. ವಿನಯ್ ಎಂ ವಿ ಮಾತನಾಡಿ, ಆಕೆಯ ಸಂಕೀರ್ಣ ರೋಗನಿರೋಧಕ ಸ್ಥಿತಿಯನ್ನು ಸಂಪೂರ್ಣವಾಗಿ ಗುಣಪಡಿಸಲಾಗಿದೆ ಮತ್ತು ಅಸ್ಥಿಮಜ್ಜೆ ಕಸಿ ಅವಳಿಗೆ ಅಮೃತವಾಗಿ ಕೆಲಸ ಮಾಡಿದೆ. ದೇಶದಲ್ಲಿ ಅಸ್ಥಿಮಜ್ಜೆ ಕಸಿ ಸೇವೆಗಳ ಅವಶ್ಯಕತೆ ದೊಡ್ಡದಿದೆ. 130 ಕೋಟಿ ಜನಸಂಖ್ಯೆಗೆ, ಪ್ರತಿ ವರ್ಷ ಕನಿಷ್ಠ 10,000 ಕಸಿ ಅಗತ್ಯವಿದೆ. ಪ್ರಸ್ತುತ, ದೇಶದಲ್ಲಿ ಕೇವಲ 2500 ಕಸಿಗಳನ್ನು ಮಾಡಲಾಗುತ್ತದೆ ಎಂದರು.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಡಾ. ವಾಸುದೇವ ಭಟ್ ಕೆ ನೇತೃತ್ವದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು, ಮಕ್ಕಳಲ್ಲಿ ಅಸ್ಥಿಮಜ್ಜೆ ಕಸಿ ಸೇರಿದಂತೆ ಸಂಕೀರ್ಣ ಹೆಮಟೊಲಾಜಿಕಲ್ (ರಕ್ತಶಾಸ್ತ್ರ), ಆಂಕೊಲಾಜಿಕಲ್ ಅಸ್ವಸ್ಥತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ ಮತ್ತು ಮಕ್ಕಳಿಗೆ ಹೊಸ ಭರವಸೆಯನ್ನು ನೀಡುತ್ತಿದೆ ಎಂದು ಹೇಳಿ ಕರಾವಳಿಯಲ್ಲಿ  ಮೊದಲ ಬಾರಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆ ಕಸಿ ನಡೆಸಿದ ವೈದ್ಯರ ಜಂಟಿ ತಂಡದ ಕೆಲಸವನ್ನು ಶ್ಲಾಘಿಸಿದರು. 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.