ಉಡುಪಿ, ಸೆ. 30: (ಉಡುಪಿ ಬುಲೆಟಿನ್ ವರದಿ) ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರದ 4ನೇ ಮುಖ್ಯರಸ್ತೆಯಲ್ಲಿ 6 ಅಡ್ಡರಸ್ತೆಗಳಿವೆ. ಅವುಗಳಲ್ಲಿ 2ನೇ ಅಡ್ಡರಸ್ತೆ (ಗೋಪಾಲಪುರ ನಾಗಬನ ರಸ್ತೆ) ನೇರವಾಗಿ ಇರುವ ಕಾರಣ ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಬಳಸದೇ ನೇರವಾಗಿ ಮಲ್ಪೆ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಕೆಳಾರ್ಕಳಬೆಟ್ಟು, ಸುಬ್ರಹ್ಮಣ್ಯನಗರ ರಸ್ತೆಗಳಿಗೂ ಈ ರಸ್ತೆ ಸಂಪರ್ಕಿಸುವ ಕಾರಣ ಕಳೆದ ಕೆಲವು ವರ್ಷಗಳಿಂದ ಈ ರಸ್ತೆಯನ್ನು ಉಪಯೋಗಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ರಸ್ತೆ ಎಷ್ಟು ಅನುಕೂಲ ಕಲ್ಪಿಸುತ್ತದೆಯೋ ಅಷ್ಟೇ ತಲೆನೋವಾಗಿ ಪರಿಣಮಿಸಿದೆ. ಕಾರಣ, ನಾಗಬನ ದಾಟಿ ಎರಡನೇ ಅಡ್ಡರಸ್ತೆಯ ಮೂಲಕ ಸಾಗುವಾಗ ಗೋಪಾಲಪುರ 4ನೇ ಮುಖ್ಯ ರಸ್ತೆ ಮತ್ತು 2ನೇ ಅಡ್ಡರಸ್ತೆ ಕೂಡುವ ಸ್ಥಳದಲ್ಲೇ ಅತ್ಯಧಿಕ ಅಪಘಾತಗಳು ಸಂಭವಿಸುತ್ತಿವೆ. ಆದರೆ ಈ ಅಪಘಾತಗಳು ಯಾವ ರೀತಿ ಅಂದರೆ ಗೋಪಾಲಪುರ 4ನೇ ಮುಖ್ಯರಸ್ತೆಯಿಂದ ಬರುವ ಸವಾರರಿಗೆ ಎರಡನೆ ಅಡ್ಡರಸ್ತೆಯಿಂದ ಬರುವ ಸವಾರರು ಕಾಣುವುದಿಲ್ಲ. ಅದೇ ರೀತಿ ಎರಡನೇ ಅಡ್ಡರಸ್ತೆಯಿಂದ ಬರುವವರಿಗೆ ಅದಕ್ಕಿಂತ ಕಡೆ ಪರಿಸ್ಥಿತಿ, ವಾಹನ ಬಂದು ತಾಗಿದಾಗ ಮಾತ್ರ ವಾಹನ ಇದೆ ಎಂದು ಗೊತ್ತಾಗುವುದು. ಶನಿವಾರ ಮಧ್ಯಾಹ್ನ ಕೂಡ ಧಡ್ ಎಂದು ಸದ್ದು ಬಂದಾಗ ಗೊತ್ತಾಯಿತು ಅಪಘಾತಗಳ ಸಂಖ್ಯೆಗೆ ಮತ್ತೊಂದು ಸೇರ್ಪಡೆ ಆಗಿದೆ ಎಂದು.
ತುರ್ತಾಗಿ ಹಂಪ್ಸ್ ನಿರ್ಮಾಣ ಆಗಬೇಕಿದೆ: ಈ ಭಾಗದ ರಸ್ತೆಯಲ್ಲಿ ಹಂಪ್ಸ್ ನಿರ್ಮಾಣ ಆದರೆ ಸಹಜವಾಗಿ ಸವಾರರು ವೇಗವನ್ನು ತಗ್ಗಿಸುತ್ತಾರೆ, ಆಗ ವಾಹನಗಳು ಪರಸ್ಪರ ಢಿಕ್ಕಿಯಾಗುವುದನ್ನು ತಪ್ಪಿಸಬಹುದು. ಹಂಪ್ಸ್ ಅಳವಡಿಸಿ ಎಂದು ಹಲವಾರು ಬಾರಿ ಹೇಳಿದ್ದೇವೆ. ಆದರೆ, ಆರ್.ಟಿ.ಒ ಅನುಮತಿ ಇಲ್ಲದೆ ಹಂಪ್ಸ್ ನಿರ್ಮಾಣ ಅಸಾಧ್ಯ ಎಂದು ನಗರಸಭೆಯವರು ಹೇಳಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಅತಿವೇಗದಿಂದ ಬರುವ ವಾಹನಗಳಿಂದ ಹಿರಿಯ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ. ನಾವು ಎಷ್ಟೇ ಜಾಗರೂಕತೆಯಿಂದ ವೇಗ ತಗ್ಗಿಸಿ ಹಾರ್ನ್ ಹಾಕಿದರೂ ಅತ್ತ ಕಡೆಯಿಂದ ಬರುವವರಿಗೆ ನಮ್ಮ ವಾಹನ ಕಾಣಿಸುವುದಿಲ್ಲ. ಇದರಿಂದಲೇ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರಾದ ಮೋಹನ್ ರಾವ್.
ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿರುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದ್ದರಿಂದ ಅವರ ಅನುಮತಿ ಇಲ್ಲದೇ ಆಗುವುದಿಲ್ಲ, ಇವರ ಅನುಮತಿ ಬೇಕು ಎಂದು ವಿಳಂಬ ಮಾಡದೇ, ಆದಷ್ಟು ಶೀಘ್ರದಲ್ಲಿ ಈ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಭವಿಸುತ್ತಿರುವ ಅಪಘಾತಗಳಿಗೆ ಪೂರ್ಣ ವಿರಾಮ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.