Home ಅಂಕಣ ಮರೆಯಲಾಗದ ಚಿತ್ರದುರ್ಗದ ಕೋಟೆ

ಮರೆಯಲಾಗದ ಚಿತ್ರದುರ್ಗದ ಕೋಟೆ

519
0

ಮ್ಮ ಇಷ್ಟದ ಕೆಲಸ ವೃತ್ತಿಯಾದರೆ ಎಷ್ಟು ಚೆನ್ನ. ನಮ್ಮ ವೃತ್ತಿ ನಮಗೆ ಎಷ್ಟು ಪ್ರೀತಿ ಎಂದು ನಮ್ಮ ಕಾರ್ಯದಲ್ಲಿ ತೋರುವುದು. ಯಾವುದೇ ಕಾರ್ಯ ಅಥವಾ ಯಾವುದೇ ವಿಷಯ ನಮಗೆ ಬೇರೆಯವರಿಂದ ಸ್ಪೂರ್ತಿ ದೊರೆಯುವುದು ಯಾವಾಗ ಗೊತ್ತಾ ಆ ವ್ಯಕ್ತಿ ತನ್ನ ಪ್ರೀತಿಯ ಕೆಲಸ ಮಾಡಿದಾಗ. ಇದು ಯಾವುದೇ ಕ್ಷೇತ್ರದಲ್ಲಿ ಇರಲಿ ಸ್ಪೋರ್ಟ್ಸ್, ಸಂಗೀತ ,ಕಲೆ, ಸಾಹಿತ್ಯ ಯಾವುದೇ ಇರಬಹುದು ಅವರ ಜೀವ ಅದರಲ್ಲಿ ಇರುತ್ತದೆ. ಆಗ ಮಾತ್ರ ನಮಗೆ ಅವರಿಂದ ಪ್ರೇರಣೆ ದೊರೆಯುತ್ತದೆ. ಹೌದು ಅಲ್ವಾ ನೋಡಿ.

ಇಷ್ಟೆಲ್ಲಾ ಪೀಠಿಕೆ ಯಾಕೆ ಕೊಡುತ್ತಾ ಇರುವುದೆಂದರೆ ನನ್ನ ಪ್ರವಾಸದಲ್ಲಿ ಆದ ಅನುಭವದಿಂದ ಆ ವ್ಯಕ್ತಿಯಿಂದ. ಆ ವ್ಯಕ್ತಿ ಏಳು ಸುತ್ತಿನ ಜಗತ್ಪ್ರಸಿದ್ಧ ಚಿತ್ರದುರ್ಗದ ಕೋಟೆಯ ನಮ್ಮ ಗೈಡ್ ಆಗಿದ್ದರು. ತಮ್ಮ ಕಾಯಕವನ್ನು ಬಲು ಪ್ರೀತಿಸುತ್ತಿದ್ದರು. ಚಿತ್ರದುರ್ಗದ ಇತಿಹಾಸವನ್ನು ಹೇಳುವಾಗ ಅವರಿಗೆ ಇರುವ ಆ ಗೌರವ ಆ ಒಂದು ಹೆಮ್ಮೆಯು ಪ್ರತಿಕ್ಷಣ ತೋರುತ್ತಿತ್ತು. ಪ್ರವಾಸವು ನಮಗೆ ಬೇರೆ ಬೇರೆ ಸ್ಥಳಗಳ ಪರಿಚಯದ ಜೊತೆ ಸಂಸ್ಕೃತಿ, ಭಾಷೆ, ನಡೆ , ಆಹಾರ ಪದ್ಧತಿ ಎಲ್ಲವನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲದೆ ನಮಗೆ ಅಪಾರ ಅನುಭವ ಕೂಡ ಸಿಗುವುದು. ಅವರ ಹೆಸರು ನನಗೆ ನೆನಪಿಲ್ಲ ಆದರೆ ಸಾಧಾರಣ ಅವರು 50 ವರ್ಷದ ವ್ಯಕ್ತಿಯಾಗಿದ್ದರು. ನನಗೆ ಚಿತ್ರದುರ್ಗದ ಕೋಟೆ ಬಲು ಇಷ್ಟವಾದದ್ದು ಆ ಗೈಡ್ ಅವರಿಂದ ಅವರ ಮಾತಿನ ಮ್ಯಾಜಿಕ್ ನಿಂದ. ನಾವು 2012ರಲ್ಲಿ ನಾನು ನನ್ನ ಯಜಮಾನರು ಮಗ ಮಗಳು ಹಾಗೂ ನನ್ನ ಅಪ್ಪ ಅಮ್ಮ ಜೊತೆ ನಮ್ಮ ಕಾರಿನಲ್ಲಿ ಕಾರ್ಕಳದಿಂದ ಹೊರಟೆವು. ಕಾರ್ಕಳದಿಂದ ಸುಮಾರು 250 ಕಿಲೋ ಮೀಟರ್ ದೂರದಲ್ಲಿದೆ ಚಿತ್ರದುರ್ಗ. ನಾವು ಮಧ್ಯಾಹ್ನ ಹೊರಟು ಅಲ್ಲಿ ತಲುಪುವಾಗ ರಾತ್ರಿ ಆಗಿತ್ತು. ಮರುದಿನ ಬೆಳಿಗ್ಗೆ ಕೋಟೆಯನ್ನು ವೀಕ್ಷಿಸಲು ತಯಾರಾದೆವು. ಕೋಟೆ ಹತ್ತಿರದ ದಾರಿ ಮಾತ್ರ ಸರಿ ಇರಲಿಲ್ಲ ಹೊಂಡಗಳಿಂದ ಕೂಡಿದ್ದು ಜಾಗ ಇರುವ ಕಡೆ ಕಾರನ್ನು ತಿರುಗಿಸಿ ಮುಂದೆ ಹೋಗುತ್ತಿದ್ದೆವು. ಜಗತ್ಪ್ರಸಿದ್ಧ ಕೋಟೆಯ ಹೊಗುವ ದಾರಿ ನೋಡಿ ಅಯ್ಯೋ ಅನಿಸಿತು. ಎಷ್ಟೋ ಜನರು ಇಲ್ಲಿ ಬರುತ್ತಾರೆ ಕೋಟೆಯ ಸುತ್ತು ಹೀಗಿದ್ದರೆ ಹೇಗೆ ? ಅನಿಸಿತು. ಇದು 10 ವರ್ಷದ ಹಿಂದಿನ ಮಾತು. ಈಗ ಸರಿಯಾಗಿರಬೇಕು ಗೊತ್ತಿಲ್ಲ.

ನಮಗೆ ಸಿಕ್ಕ ಗೈಡ್ ಎಷ್ಟು ಚಂದ ಮಾಡಿ ಎಲ್ಲ ಸ್ಥಳಗಳನ್ನು ಇತಿಹಾಸವನ್ನು ಹೇಳಿದ್ದರಿಂದ ನನಗೆ ನಮ್ಮ ಕರ್ನಾಟಕದ ಅರಸರ ಮೇಲೆ ಹೆಮ್ಮೆ ಅನಿಸುತ್ತಿತ್ತು. 13ನೇ ಶತಮಾನದಲ್ಲಿ ಚಾಲುಕ್ಯರು ಗ್ರಾನೈಟ್ ಕಲ್ಲುಗಳಿಂದ ಕೋಟೆಯನ್ನು ಕಟ್ಟಿದ್ದರು. ತದನಂತರ ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿತ್ತು. ಈ ಕೋಟೆಯಲ್ಲಿ ನೀರಿನ ಜಲಾಶಯವಿರುವುದರಿಂದ ಜನರಿಗೆ ನೀರಿನ ಕೊರತೆ ಇರಲಿಲ್ಲ . ಆಹಾರಕ್ಕೆ ಕೊರತೆ ಇರಲಿಲ್ಲ. ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಅನೇಕ ಕೋಣೆಗಳಿದ್ದವು. ಎಲ್ಲರಿಗೂ ತಿಳಿದಿರುವ ಒನಕೆ ಓಬವ್ವನ ಕಿಂಡಿ ಅವಳ ಸಾಹಸ ಪ್ರಾಣತ್ಯಾಗ ಎಲ್ಲರಿಗೂ ತಿಳಿದಿದೆ. ಅದನ್ನು ನೋಡಿದೆವು. ಬೆಟ್ಟದ ಮೇಲೆ ದೇವಾಲಯಗಳಿವೆ. ಇಲ್ಲಿ ಮಳೆ ನೀರನ್ನು ಕೊಯ್ಲು ಮಾಡಲು ಉಪಯೋಗಿಸುತ್ತಿದ್ದರು. ಈ ಕೋಟಿ ಎಷ್ಟು ಭದ್ರವಾಗಿತ್ತು ಎಂದರೆ ಯಾರು ಕೂಡ ಒಳಗೆ ನುಸುಳಲು ಅವಕಾಶವಿರಲಿಲ್ಲ. 19 ಗೇಟ್ವೇ ಗಳು, 38 ಹಿಂಭಾಗದ ಪ್ರವೇಶ ದ್ವಾರಗಳು , 35 ರಹಸ್ಯ ಪ್ರವೇಶ ದ್ವಾರಗಳು, ನಾಲ್ಕು ಅಗೋಚರ ಮಾರ್ಗಗಳು. ಶತ್ರುಗಳ ಆಕ್ರಮಣಗಳ ನಿಗಾ ಇಡಲು 2,000 ವಾಚ್ ಟವರ್ ಗಳು. ಗೊಡೆಯು ಅಂಕುಡೊಂಕಾಗಿದ್ದು ಕಿರಿದಾದ ದಾರಿ ಇದೆ. ಹೀಗಿರುವುದರಿಂದ ಶತ್ರುಗಳು ಗೇಟ್ ಹೊಡೆಯಲು ಆನೆಗಳನ್ನು ಬಳಸುವುದಕ್ಕೆ ಆಗುತ್ತಿರಲಿಲ್ಲ. ಕೋಟಿಯ ಸುತ್ತು ಬಿಲ್ಲುಗಾರರು ಇರುತ್ತಿದ್ದರು.

ಇಷ್ಟೆಲ್ಲಾ ಭದ್ರತೆ ಇದ್ದರು ಕೂಡ ನಮ್ಮವರೇ ಶತ್ರುಗಳಿಗೆ ಸಹಾಯ ಮಾಡಿ ಒಳಗೆ ಬರುವಂತೆ ಮಾಡಿದರೆ ಆಗ ನಮ್ಮನ್ನು ರಕ್ಷಿಸುವವರು ಯಾರು. ಇದೆ ಆದದ್ದು ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸರಾದ ದುರ್ಗದ ಹುಲಿ ಎಂದೆ ಹೆಸರುವಾಸಿಯಾದ ಮದಕರಿ ನಾಯಕರಿಗೆ. ಇವರ ಶ್ರೇಯಸ್ಸು ಎಲ್ಲಾ ಕಡೆ ಹಬ್ಬಿತು ವಿಜಯನಗರ ಸಾಮ್ರಾಜ್ಯದ ಮೇಲೆ ಶತ್ರುಗಳ ಕಣ್ಣು ಯಾವಾಗಲೂ ಇರುತ್ತಿತ್ತು. ಇವರ ಶೌರ್ಯಕ್ಕೆ ಸರಿ ಸಮಾನರು ಯಾರು ಇರಲಿಲ್ಲ. ಅನೇಕ ಯುದ್ಧಗಳನ್ನು ಮಾಡಿ ಶತ್ರುಗಳನ್ನು ಸೋಲಿಸುತ್ತಿದ್ದರು. ಹೈದರಲಿಯನ್ನು ಎರಡು ಬಾರಿ ಸೊಲಿಸಿ ಮೂರನೆಯ ಬಾರಿ ಹೈದರ್ ಅಲಿಯು ಮೋಸ ಮಾಡಿ ಮದಕರಿ ನಾಯಕನ ಅಧಿಕಾರಿಗಳ ಸಹಾಯದಿಂದ ಕೋಟೆಯ ಒಳಗೆ ಪ್ರವೇಶಿಸಿ ನಾಯಕರನ್ನು ಸೋಲಿಸಿದರು. ಈ ಕಥೆಯನ್ನು ಕೇಳಿ ಬಹಳ ದುಃಖವಾಯಿತು. ಅಷ್ಟು ಸುರಕ್ಷಿತವಾದ ಕೋಟೆ ಇದ್ದು ಏನು ಪ್ರಯೋಜನ ನಮ್ಮವರೇ ನಮಗೆ ಮೋಸ ಮಾಡಿದರೆ .

ನಾವು ಕೋಟೆಯನ್ನು ವೀಕ್ಷಿಸುವಾಗ ಕೋತಿರಾಜ್ ಎಂದು ಹೆಸರುವಾಸಿಯಾದ ಅಥವಾ ಸ್ಪೈಡರ್ ಮ್ಯಾನ್ ಎಂದು ಖ್ಯಾತಿ ಯಾದ ಇವರು ಕೋಟೆಯನ್ನು ಸಲೀಸಾಗಿ ಯಾವುದೆ ಸಾದನವನ್ನು ಬಳಸದೆ ಹತ್ತುವುದನ್ನು ವೀಕ್ಷಿಸಿದೆವು. ಹಿಡಿತಕ್ಕಾಗಿ ಬರೀ ಸೀಮೆ ಸುಣ್ಣವನ್ನು ಮಾತ್ರ ಕೈಗಳಿಗೆ ಹಚ್ಚುವುದು ಇವರ ಕ್ರಮ. ಅವರು ಹತ್ತುವುದನ್ನು ನೋಡಿ ನನ್ನ ಮಗ ನಾನು ಹತ್ತುತ್ತೇನೆ ಎಂದು ಕೋಟೆ ಹತ್ತಲು ಪ್ರಯತ್ನ ಮಾಡುತ್ತಿದ್ದ. ಆಗ ಅವನಿಗೆ ಐದು ವರ್ಷ. ಚಿತ್ರದುರ್ಗದ ಕೋಟೆ ನೋಡಲೇಬೇಕಾದ ಸ್ಥಳ. ಗೈಡ್ ಅನ್ನು ಕರೆದುಕೊಂಡು ಹೋಗಿ. ಯಾರಿಗೆ ಗೊತ್ತು ನಿಮಗು ಒಳ್ಳೆಯ ಅನುಭವನಾಗಬಹುದು. ನಮ್ಮ ಇತಿಹಾಸವನ್ನು ಕೇಳಿ ಅದನ್ನು ನೋಡಿ ಅನುಭವಿಸ ಬೇಕು. ಜೈ ಕರ್ನಾಟಕ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.