ಗಂಗೊಳ್ಳಿ: ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನವಾದ ಭಾರತೀಯ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯುವುದರಿಂದ ಭಾರತೀಯ ಸಂಸ್ಕೃತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಬಾಲ್ಯದಲ್ಲಿಯೇ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಈ ನಿಟ್ಟಿನಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಸಂಸ್ಥೆಯು ತಮ್ಮ ಎಲ್ಲಾ ಶಾಲೆಗಳಲ್ಲಿ ಸಂಸ್ಕೃತವನ್ನು ಕಲಿಯಲು ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಇದು ಎಲ್ಲರಿಗೂ ಅನುಸರಣೀಯವಾದ ಕಾರ್ಯವಾಗಿದೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳುವಂತಾಗಲಿ ಎಂದು ಕೋಟ ವಿವೇಕ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕರಾದ ಶಂಭು ಭಟ್ ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಸ್ಕೃತ ತರಗತಿಗಳ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ಕಾಮತ್, ಸಂಸ್ಕೃತವನ್ನು ಕಲಿತು ಸಂಸ್ಕಾರವಂತರಾಗಿ ಸಂಸ್ಕೃತಿಯನ್ನು ಬೆಳೆಸಿರಿ ಎಂದು ಹೇಳಿದರು. ರಾಮನಾಥ ನಾಯಕ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾರ್ಥಿಗಳಿಗೆ ಸಂಸ್ಕೃತ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವೆಂಕಟೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ವಿ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀಪತಿ ಭಟ್, ದೈಹಿಕ ಶಿಕ್ಷಕರಾದ ನಾರಾಯಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಎಸ್ ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಸ್ಕೃತ ವಿದ್ಯಾರ್ಥಿನಿಯರಾದ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ, ಗೌತಮಿ, ದೀಕ್ಷಾ ಮತ್ತು ಅರ್ಪಿತ ಪ್ರಾರ್ಥನೆ ನೆರವೇರಿಸಿದರು. ಮನಾಲಿ ಸ್ವಾಗತಿಸಿ, ವಂದಿಸಿದರು.