ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇದರ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಜಿಲ್ಲಾ ಸಂಸ್ಥೆಯ ತರಬೇತುದಾರರಾದ ವಿತೇಶ್ ಕಾಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಅವರು ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಗೆ ಸಂಬಂಧಿಸಿದ ಉದ್ದೇಶಗಳು, ನಿಯಮಗಳು ಹಾಗೂ ಕೌಶಲಗಳನ್ನು ತಿಳಿಸಿದರು. “ಸ್ಕೌಟಿಂಗ್ ಚಳುವಳಿಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಹಾಗೂ ಸಮಾಜಮುಖಿ ಚಿಂತನೆಯನ್ನು ಬೆಳೆಸಲು ಸಹಕಾರಿಯಾಗಿದೆ. ಯುವಶಕ್ತಿಯ ಸದ್ಭಳಕೆಗೆ ಇಂತಹ ಸಂಘಟನೆಗಳು ಪೂರಕವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಮಾತನಾಡಿ, ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿ ಇಂದಿನ ಯುವ ಸಮುದಾಯಕ್ಕಿದೆ. ವಿದ್ಯಾರ್ಥಿಗಳು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಯದ ಸದುಪಯೋಗದ ಜೊತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಡಾ. ಉದಯ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು. ರೇಂಜರ್ ಲೀಡರ್ ಸುಷ್ಮಾ ಟಿ. ವಂದಿಸಿದರು.