ಉಡುಪಿ, ಮಾ.9: ತಮ್ಮ ಜೀವಿತಾವಧಿಯಲ್ಲಿ ಮಹಿಳೆಯರು ತಾಯಿ, ಸಹೋದರಿ, ಹೆಂಡತಿ, ಮಗಳು ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಕುಟುಂಬವನ್ನು ಮುನ್ನಡೆಸುತ್ತಾರೆ. ಕುಟುಂಬದ ಜೊತೆ ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆಯೂ ಮಹಿಳೆಯರ ಮೇಲಿದೆ. ಮಹಿಳೆಯರು ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ, ಪರ್ಯಾಯ ಶ್ರೀ ಶಿರೂರು ಮಠ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಈ ಸಮಾಜದ ಆಸ್ತಿ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಿದಾಗ ಇಡೀ ಕುಟುಂಬ ಏಳಿಗೆ ಕಾಣುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ನಾಯಕರಾದಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಆಡಳಿತ ನಡೆಸುತ್ತಾರೆ. ಮಹಿಳೆಯರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ದೇಶದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಲ್ಲಿ ಶೇ. 33% ಮಹಿಳಾ ಪ್ರಾತಿನಿಧ್ಯ ನೀಡುವ ಕಾರ್ಯ ನಡೆಯಿತು. ಇದು ಮಹಿಳೆಯರ ಸಬಲೀಕರಣಕ್ಕಾಗಿ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿತ್ತು. ಇಂದಿನ ಸರ್ಕಾರ ಇದನ್ನು ಕಾನೂನಾಗಿ ಪರಿವರ್ತಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದ ಅವರು, ಜಿಲ್ಲಾ ಮಹಿಳಾ ಮಂಡಳಿಯ ಒಕ್ಕೂಟಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆದು ಸ್ವಂತ ಕಟ್ಟಡದ ಕನಸನ್ನು ನನಸು ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳು ಹಾಗೂ ನ್ಯಾಯಕ್ಕಾಗಿ ಹೋರಾಡಬೇಕು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಸರಕಾರದಲ್ಲಿ ಸರಿಯಾದ ಜನಪ್ರತಿನಿಧಿಗಳು ಇರಬೇಕು. ಸರಕಾರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಶೇ 33% ಮೀಸಲಾತಿ ನೀಡುವ ಕಾಯ್ದೆ ತರಲಾಗಿದ್ದು, ರಾಷ್ಟ್ರೀಯ ಜನಗಣತಿ ನಡೆದ ಬಳಿಕ ಇದು ಕಾನೂನಾಗಿ ಜಾರಿಯಾಗಲಿದೆ. ಮಹಿಳೆಯರಿಗೆ ಮೀಸಲಾತಿ ದೊರೆತಾಗ ಅವರ ಧ್ವನಿ ಪಂಚಾಯತ್‌ನಿಂದ ಸಂಸತ್ ಸದನದವರೆಗೆ ಪ್ರತಿಧ್ವನಿಸುವುದು. ಇದಕ್ಕಾಗಿ ಮಹಿಳೆಯರು ಈಗಿನಿಂದಲೇ ತಯಾರಿ ನಡೆಸಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಮಹಿಳೆಯರು ಶಾಸಕರಾಗಿ, ಸಂಸದರಾಗಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಇದು ಸಕಾಲ. ದೇಶದಲ್ಲಿ ಎಂದು ಮಹಿಳಾ ಮೀಸಲಾತಿ ಶೇ. 50 ರಷ್ಟು ಏರುವುದೋ ಅಂದು ಸಮಾನತೆಯ ಉದ್ದೇಶ ಸಾಕಾರವಾಗುವುದು ಮಹಿಳೆಯರಿಗೆ ನ್ಯಾಯ ದೊರೆಯುವುದು ಎಂದರು.
ಮಹಿಳೆಯರು ಉತ್ಪಾದಿಸಿದ ವಸ್ತುಗಳ ಮಳಿಗೆಗಳನ್ನು ಅನಾವರಣಗೊಳಿಸಲಾಯಿತು. ಅತ್ತುö್ಯತ್ತಮ ಸೇವೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹೆಣ್ಣು ಮಗಳನ್ನು ಉಳಿಸಿ, ಹೆಣ್ಣು ಮಗಳನ್ನು ಓದಿಸಿ ಸಹಿ ಸಂಗ್ರಹಣೆ ಅಭಿಯಾನ ನಡೆಯಿತು.
ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ನಾಗರತ್ನ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ಕಲ್ಕೂರ, ಹಿರಿಯರಾದ ಸರಳ ಕಾಂಚನ್, ಶ್ಯಾಮಲಾ ಸಿ.ಕೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಳಿಗಳ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ ಸ್ವಾಗತಿಸಿ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್ ವಂದಿಸಿ, ಸಂಗೀತ ನಿರೂಪಿಸಿದರು.




By
ForthFocus™