ಉಡುಪಿ, ಮಾ.7: ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಸಂಸ್ಥೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಗಳ ಅಧಿಕಾರಿ ಹಾಗೂ ನೌಕರರು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆ ಧರಿಸುವಂತೆ ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದು, ಅದರಂತೆ ಸರ್ಕಾರಿ ನೌಕರರಿಗೆ ತಕ್ಷಣದ ಖಾದಿ ಬಟ್ಟೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಾರ್ಚ್ 9 ರಿಂದ 14 ರ ವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜಿಲ್ಲೆಯ ಈ ಕೆಳಕಂಡ ಸ್ಥಳಗಳಲ್ಲಿ ರೂರಲ್ ರಿಸೋರ್ಸಸ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಬೆಂಗಳೂರು ಸಂಸ್ಥೆಯ ವತಿಯಿಂದ ತಾತ್ಕಾಲಿಕ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲು ವ್ಯವಸ್ಥೆ ಮಾಡಲಾಗಿರುತ್ತದೆ.
ಮಾ. 9 ಮತ್ತು 10 ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಮಾ. 11 ರಂದು ಬ್ರಹ್ಮಾವರ ಬಿ.ಆರ್.ಸಿ ಕಚೇರಿ ಆವರಣ, ಮಾ. 12 ರಂದು ಕುಂದಾಪುರ ಸರ್ಕಾರಿ ನೌಕರರ ಭವನ, ಮಾ. 13 ರಂದು ಕಾರ್ಕಳ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ಕಾರಿ ನೌಕರರ ಭವನ ಹಾಗೂ ಮಾ. 14 ರಂದು ಬೈಂದೂರು ತಾಲೂಕು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಸದರಿ ವ್ಯವಸ್ಥೆಯ ಉಪಯೋಗವನ್ನು ಪಡೆದು, ಖಾದಿ ಉದ್ದಿಮೆಯನ್ನು ಉತ್ತೇಜಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™