ಉಡುಪಿ, ಮಾ.4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಉಡುಪಿ, ಕೆ.ಎಂ.ಸಿ ಮಣಿಪಾಲ ಶ್ರವಣ ವಿಭಾಗ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ಥ್ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಉಡುಪಿ ನಾರ್ಥ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ‘ಸಮುದಾಯದಿಂದ ಹಿಡಿದು ತರಗತಿ ಕೋಣೆಯ ವರೆಗೆ ಎಲ್ಲಾ ಮಕ್ಕಳಿಗಾಗಿ ಶ್ರವಣದ ಕಾಳಜಿ’ ವಿಷಯವಾಗಿ ಮಾತನಾಡಿ, ಮಕ್ಕಳಲ್ಲಿ ಕಂಡುಬರುವ ತಡೆಗಟ್ಟಬಹುದಾದ ಶ್ರವಣ ನಷ್ಟವನ್ನು ಕಡಿಮೆ ಮಾಡಿ ಅವರ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುವಂತೆ ಮಾಡುವುದೇ ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಶ್ರವಣ ತಜ್ಞೆ ಸಮೀಕ್ಷಾ ಡಿ ರಾವ್ ಮಾತನಾಡಿ, ಮಗು ಸರಿಯಾಗಿ ಮಾತನಾಡ ಬೇಕೆಂದರೆ ಮಗುವಿಗೆ ಕೇಳುವಿಕೆ ತುಂಬಾ ಮುಖ್ಯ. ಮಕ್ಕಳು ಕಿವಿಗೆ ಕಡ್ಡಿ ಅಥವಾ ಚೂಪಾದ ವಸ್ತುವನ್ನು ಹಾಕದಂತೆ ಪೋಷಕರು ಕಾಳಜಹಿ ವಹಿಸಬೇಕು. ಕಿವಿಯಲ್ಲಿ ಸಹಜ ಸ್ವಚ್ಛಗೊಳಿಸುವ ಕಾರ್ಯ ವಿಧಾನವಿರುವುದರಿಂದ ಕಡ್ಡಿಯಿಂದ ಕಿವಿಯನ್ನು ಸ್ವಚ್ಛ ಮಾಡಬಾರದು. ಸೀಳು ತುಟಿ ಮತ್ತು ಸೀಳು ಅಂಗುಳ ಇರುವ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಕಿವಿನೋವು, ಕಿವಿಯಲ್ಲಿ ಕೀವು, ತುರಿಕೆ ಇದ್ದಲ್ಲಿ ತಕ್ಷಣವೇ ಕಿವಿ ಮೂಗು ಗಂಟಲು ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದಡಾರ, ರುಬೆಲ್ಲಾ ಲಸಿಕೆಯನ್ನು ಸರಿಯಾದ ಸಮಯದಲ್ಲಿ ತೆಗೆದು ಕೊಳ್ಳಬೇಕು ಎಂದರು.
ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಸಪ್ಪ ಬೆನ್ನಪ್ಪನವರ್, ಕೆ.ಎಂ.ಸಿ ಮಣಿಪಾಲ ಶ್ರವಣ ವಿಭಾಗದ ದಿಯಾ, ಆಂಡ್ರಿವ್, ಸಹಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೆ ಸ್ವಾಗತಿಸಿ, ಸಹಶಿಕ್ಷಕ ಗುರು ಪ್ರಸಾದ್ ವಂದಿಸಿದರು. ನಾರ್ಥ್ ಶಾಲೆಯ 85 ಮಕ್ಕಳಿಗೆ ಕಿವಿಯ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಲಾಯಿತು.




By
ForthFocus™