ಅಂಪಾರು, ಫೆ.20: ಜೆಸಿಐ ಹಾಲಾಡಿ ವಾರಾಹಿ ಘಟಕದ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ?’ ವಿಶೇಷ ಕಾರ್ಯಾಗಾರ ನಡೆಯಿತು. ಜೆಸಿಐ ತರಬೇತುದಾರರು ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ಸ್ ಟ್ರಸ್ಟ್ (ರಿ) ಹೈಕಾಡಿ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡುವ ವಿಧಾನಗಳು, ಸಮಯ ನಿರ್ವಹಣೆಯ ಕೌಶಲ್ಯಗಳು, ಗಮನ ಕೇಂದ್ರೀಕರಣದ ತಂತ್ರಗಳು ಹಾಗೂ ಮನೋಬಲ ವೃದ್ಧಿಸುವ ಚಟುವಟಿಕೆಗಳ ಮೂಲಕ ಸ್ಪಷ್ಟ ಮಾರ್ಗದರ್ಶನ ನೀಡಿದರು. ಬರೆಯುವ ವಿಧಾನ, ಅಂಕಗಳನ್ನು ಗಳಿಸುವ ತಂತ್ರಗಳು ಮತ್ತು ಉತ್ತರ ಮಂಡನೆಯ ಮಹತ್ವವನ್ನು ವಿವರಿಸಲಾಯಿತು. ಸಂವಾದಾತ್ಮಕ ಆಟಗಳು ಮತ್ತು ಉದಾಹರಣೆಗಳ ಮೂಲಕ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸುವ ಧನಾತ್ಮಕ ಮನೋಭಾವ ಬೆಳೆಸಲಾಯಿತು.
ಜೆಸಿಐ ಅಧ್ಯಕ್ಷರಾದ ಪ್ರದೀಪ್ ಹಾಲಾಡಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯ ಉದಯ್ ಕುಮಾರ್ ಬಿ ಇವರು ಭಾಗವಹಿಸಿದ್ದರು. ಶಾಲಾ ಶಿಕ್ಷಕಿಯರಾದ ಗೀತಾ ನಾಯಕ್, ಕಾವ್ಯ, ಸವಿತಾ, ಲೇಡಿ ಜೆಸಿ ಅಧ್ಯಕ್ಷೆ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಆಶಾ ಬ್ರೈಟ್ ಪರ್ಲ್ ಹಾಲಾಡಿ ಉಪಾಧ್ಯಕ್ಷ ಕೃಷ್ಣ ಭಟ್ ಹಾಲಾಡಿ, ಸಂಯೋಜಕಿ ದೀಪಾ ಶೆಟ್ಟಿ, ಸಹ ಕಾರ್ಯದರ್ಶಿ ಮಂಜುಳಾ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.




By
ForthFocus™