ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಹಾಗೂ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ, ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಮೇ 21 ರಿಂದ 23 ರವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ.
ಮೇಳದಲ್ಲಿ ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ ಹಾಗೂ ಇತರೆ ತಳಿಗಳ ಮಾವುಗಳನ್ನು ಮಾರಾಟ ಮಾಡಲಾಗುವುದು.
ಜಿಲ್ಲೆಯ ಮಾವು ಬೆಳೆಗಾರರಿಗೂ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೇ 20 ರ ಒಳಗೆ ತಾವು ಬೆಳೆದ ಮಾವಿನ ತಳಿ ಹಾಗೂ ಲಭ್ಯತೆಯ ವಿವರದೊಂದಿಗೆ ತೋಟಗಾರಿಕೆ ಉಪನಿರ್ದೇಶಕರು, ಉಡುಪಿ ದೂ.ಸಂಖ್ಯೆ: 0820-2531950 ಅನ್ನು ಸಂಪರ್ಕಿಸಿ, ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.