ಉಡುಪಿ: ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಅರಣ್ಯ ಇಲಾಖೆ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಪಾದರ ಗೌರವಾರ್ಥ ನಿರ್ಮಿಸಲಾಗುವ ಸ್ಮೃತಿವನ ನಿರ್ಮಾಣ ಕಾರ್ಯಕ್ಕೆ 2 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ರಾಜ್ಯದ ಅರಣ್ಯ ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹೇಳಿದರು.
ಅವರು ಇಂದು ಬ್ರಹ್ಮಾವರದ ನೀಲಾವರದಲ್ಲಿ ಅರಣ್ಯ ಇಲಾಖೆ ಹಾಗೂ ಶ್ರೀ ಪೇಜಾವರ ಮಠದ ಸಹಯೋಗದಲ್ಲಿ, ಉಡುಪಿ ಶ್ರೀ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಪಾದರ ಗೌರವಾರ್ಥ ನಿರ್ಮಿಸಲಾಗುವ ಸ್ಮೃತಿವನ ನಿರ್ಮಾಣ ಕಾರ್ಯದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ನಿರ್ಮಿಸಲಾಗುತ್ತಿರುವ ಸ್ಮೃತಿವನವನ್ನು 2023 ರ ಫೆಬ್ರವರಿ ಒಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದ ಸಚಿವರು, ಸ್ಮೃತಿವನದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನೂ 2 ಕೋಟಿ ರೂ. ಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ರೈತರ ಬೆಳೆಗಳಿಗೆ ಕಾಟ ನೀಡುತ್ತಿರುವ ಮಂಗಗಳ ಉಪಟಳ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ರಾಜ್ಯ ಸರ್ಕಾರದ ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಹೊರತುಪಡಿಸಿರುವ ಪ್ರದೇಶಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ನೀಲಾವರದಲ್ಲಿ ನಿರ್ಮಿಸಲಾಗುತ್ತಿರುವ ಸ್ಮೃತಿವನ ಪ್ರದೇಶದಲ್ಲಿ ಈಗಾಗಲೇ ಇರುವ ಗಿಡಮರಗಳಿಗೆ ಯಾವುದೇ ಹಾನಿ ಮಾಡದೇ, ಅಪರೂಪದ ಸಸ್ಯವನವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ವನದಲ್ಲಿ ವಿಶ್ವೇಶ್ವತೀರ್ಥ ಶ್ರೀಪಾದರ ಜೀವನವನ್ನು ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಮತ್ತು ತತ್ವಶಾಸ್ತ್ರ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ಸ್ಥಳೀಯ ಜನರಿಗೆ ಪಡಿತರದಲ್ಲಿ ನೀಡುತ್ತಿರುವ ಅಕ್ಕಿಯನ್ನು ಹೆಚ್ಚಾಗಿ ಕರಾವಳಿ ಭಾಗದ ಜನರು ಬಳಸುವುದಿಲ್ಲ ಈ ಹಿನ್ನಲೆ ಅವರುಗಳಿಗೆ ಕುಚ್ಚಿಗೆ ಅಕ್ಕಿಯನ್ನು ಪಡಿತರದಲ್ಲಿ ವಿತರಣೆ ಮಾಡಬೇಕೆಂದು ಶಾಸಕ ಕೆ. ರಘುಪತಿ ಭಟ್ ಸಚಿವರ ಗಮನಕ್ಕೆ ತಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಸೇರ್ಪಡೆ ಮಾಡುವ ಉಪಕರಣಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಗಿಡಗಳನ್ನು ನೆಡುವ ಮೂಲಕ ಶುದ್ಧ ವಾತಾವರಣವನ್ನು ದೊರೆಯುವಂತೆ ಮಾಡಬೇಕು.
ರೈತರ ಬೆಳೆಗಳಿಗೆ ಹಾನಿ ಮಾಡುವ ಮಂಗಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅವುಗಳನ್ನು ಹಿಡಿದು ಕುದ್ರು ಪ್ರದೇಶಗಳಿಗೆ ಬಿಟ್ಟು, ಸೂಕ್ತ ಆಹಾರ ವ್ಯವಸ್ಥೆ ಮಾಡುವುದರಿಂದ ನಿಯಂತ್ರಣ ಸಾಧ್ಯವಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶಿಸರ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೆಟಾಲ್ಕರ್, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಡಿಎಫ್‌ಓ ಗಳಾದ ಡಾ.ದಿನೇಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಸ್ವಾಗತಿಸಿದರು. ವಾಸುದೇವ ಭಟ್ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಕಾಶ್ ನೇಟಾಲ್ಕರ್, ಅರಣ್ಯ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.