ಉಡುಪಿ, ಏ.14: ಸೌರ ಯುಗಾದಿಯ ಪರ್ವ ದಿನದಂದು, ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜಗದ್ಗುರುಗಳಾದ ವಿಶ್ವವಂದ್ಯರಾದ ಸ್ವರೂಪೋದ್ಧಾರಕರಾದ, ಸರ್ವಜ್ಞಾಚಾರ್ಯರಾದ ಶ್ರೀಮದಾನಂದತೀರ್ಥ ಶ್ರೀಪಾದರು ಕುಳಿತಿರುವ ದಿವ್ಯ ಸಾನ್ನಿಧ್ಯವಿರುವ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚವನ್ನು ತೊಡಿಸಿ ಶ್ರೀಕೃಷ್ಣನಿಗೆ, ತಮ್ಮ ಪ್ರಿಯ ಗುರುಗಳಾದ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮೂಲಕ ಅರ್ಪಣೆ ಮಾಡುವುದರ ಮೂಲಕ ತಮ್ಮ ಸನ್ಯಾಸಾಶ್ರಮದ ಐವತ್ತನೆಯ ವರ್ಷದ ಆಚರಣೆಯನ್ನು ಸುವರ್ಣ ಮಹೋತ್ಸವವನ್ನು ಸಾರ್ಥಕಗೊಳಿಸಿಕೊಂಡರು.
ಶ್ರೀಪಾದರ ಅಪೇಕ್ಷೆಯಂತೆ ಈ ಕಾರ್ಯಕ್ರಮದಲ್ಲಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಚನವಿತ್ತರು. ಸರ್ವಜ್ಞ ಪೀಠದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರೊಂದಿಗೆ ಆಚಾರ್ಯರ ರೂಪವೆಂದೆ ಜ್ಞಾನಿಗಳು ಪರಿಗಣಿಸಿದ ಸರ್ವಮೂಲ ಗ್ರಂಥಗಳನ್ನು ಇರಿಸಲಾಗಿದ್ದು ಅವೇ ಮುಖ್ಯಾರ್ಥದಲ್ಲಿ ಸು-ವರ್ಣ ಗಳಿಸಿದ್ದು ಈ ಮೂಲಕ ಸರ್ವಜ್ಞ ಸುವರ್ಣ ಸಿಂಹಾಸರಿಂದ ವೈಷ್ಣವ ಭಕ್ತಿ ಸಿದ್ದಾಂತ ಪ್ರಚಾರ ಆಗುವಂತೆ ಕೃಷ್ಣ ದೇವರು ಅನುಗಹಿಸಲಿ ಎಂದು ಪರ್ಯಾಯ ಪತ್ತಿಗೆ ಶ್ರೀಗಳು ಭಾವುಕರಾಗಿ ನುಡಿದರು.
ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಅನೇಕ ಮಂದಿ ಭಕ್ತರು ಹಾಗೂ ವಿದ್ವಾಂಸರು ಪಾಲ್ಗೊಂಡರು. ಸುವರ್ಣ ಕವಚ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಜ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ ಅವರನ್ನು ಅನುಗ್ರಹಿಸಿದರು.




By
ForthFocus™