ಮಣಿಪಾಲ, ನ.21: ಪ್ರಮುಖ ಆರೋಗ್ಯ ಸಂಸ್ಥೆಯಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಬ್ಲಾಕ್‌ನಲ್ಲಿ ಹೊಸದಾಗಿ ನವೀಕರಿಸಿದ ವೈದ್ಯಕೀಯ ಆಂಕೊಲಾಜಿ ಹೊರರೋಗಿ ವಿಭಾಗ ಮತ್ತು ಕೀಮೋಥೆರಪಿ ಡೇ ಕೇರ್ ಕೇಂದ್ರದ ಉದ್ಘಾಟನೆಯೊಂದಿಗೆ ರೋಗಿಗಳ ಆರೈಕೆ ಸೇವೆಯಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಯಿತು.
ನವೀಕರಿಸಿದ ಸೌಲಭ್ಯಗಳು ರೋಗಿಗಳು ಮತ್ತು ಸಂದರ್ಶಕರಿಗೆ ಆರಾಮದಾಯಕ ಅನುಭವವನ್ನು ಖಾತ್ರಿಪಡಿಸುವ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಾಯುವ ಕೋಣೆಯೊಂದಿಗೆ ಆರಾಮದಾಯಕ ಸಮಾಲೋಚನೆ ಸೌಲಭ್ಯವನ್ನು ಒಳಗೊಂಡಿವೆ. ಡೇ ಕೇರ್ ಕೇಂದ್ರವು ಕೀಮೋಥೆರಪಿ ಮತ್ತು ಇತರ ವಿಶೇಷ ಆಂಕೊಲಾಜಿ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಸುಧಾರಿತ ಡೇ ಕೇರ್ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡುತ್ತಾ, ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸಲು ಮತ್ತು ರೋಗಿಗಳ ಸೌಕರ್ಯವನ್ನು ಹೆಚ್ಚಿಸಲು ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.
ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್ ಕೆ. ರಾವ್ ಅವರು ನವೀಕರಿಸಿದ ಹೊರ ರೋಗಿ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಾ, ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ತೆಗೆದುಕೊಂಡ ಸಮಗ್ರ ವಿಧಾನವನ್ನು ಶ್ಲಾಘಿಸಿದರು.
ವೈದ್ಯಕೀಯ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಕಾರ್ತಿಕ್ ಉಡುಪ ಮತ್ತು ಡಾ. ಅನಂತ್ ಪೈ ಅವರು ನವೀಕರಿಸಿದ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳ ಶ್ರೇಣಿ ಮತ್ತು ವರ್ಧಿತ ರೋಗಿಗಳ ಆರೈಕೆ ಸಾಮರ್ಥ್ಯಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆಎಂಸಿ ಮಣಿಪಾಲದ ಸಹ ಡೀನ್ ಮತ್ತು ಮಣಿಪಾಲ್ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ನ ಸಂಯೋಜಕರಾದ ಡಾ. ನವೀನ್ ಸಾಲಿನ್ಸ್ ಮತ್ತಿತರರು ಉಪಸ್ಥಿತರಿದ್ದರು.