ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಇಲ್ಲಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕೋಟೇಶ್ವರದ ನಮ್ಮ ಕಲಾಕೇಂದ್ರ ಹಾಗೂ ಉಡುಪಿಯ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ
ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಂಸ್ಕೃತಿಕ ಚಿಂತಕ ಪಡುಕೆರೆ ಉದಯಕುಮಾರ್ ಶೆಟ್ಟಿ ಅವರು, ಸಾಂಸ್ಕೃತಿಕ ಚಟುವಟಿಕೆಗಳು ಕೇವಲ ಮನರಂಜನೆಯಲ್ಲ, ಅದು ನಮ್ಮ ಬದುಕು ರೂಪಿಸುವ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾಧ್ಯಮ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಸಾಂಸ್ಕೃತಿಕ ಕಲೆಗಳು ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಹಪಠ್ಯರೂಪದಲ್ಲಿ ಅತ್ಯಗತ್ಯ ಹಾಗೂ ವಿದ್ಯಾರ್ಥಿಗಳನ್ನು ಕ್ರೀಯಾಶೀಲವಾಗಿ ಬೆಳೆಸುತ್ತವೆ ಎಂದರು.
ಯಕ್ಷಗಾನ ತರಬೇತಿ ನೀಡಿದ ಯಕ್ಷಗುರು ಶಂಕರ್ ಬಾಳ್ಕುದ್ರು, ದಾಮೋದರ ಶರ್ಮ ಉಪಸ್ಥಿತರಿದ್ದರು. ನಮ್ಮ ಕಲಾ ಕೇಂದ್ರ ಅಧ್ಯಕ್ಷರಾದ ರಂಜಿತ್‌ಕುಮಾರ್ ಶೆಟ್ಟಿ, ನೆಹರು ಯುವ ಕೇಂದ್ರದ ವಿಷ್ಣುಮೂರ್ತಿ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ರವಿಪ್ರಸಾದ್ ಕೆ.ಜಿ, ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿ ಕಾರ್ಯಕ್ರಮದ ಸಂಚಾಲಕ, ಕನ್ನಡ ಉಪನ್ಯಾಸಕರಾದ ರಂಜಿತ್‌ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು. ಆಂಗ್ಲಭಾಷಾ ಉಪನ್ಯಾಸಕರಾದ ಶುಭಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ಗಾಯನ ಹಾಗು ಯಕ್ಷಗಾನ “ಕವಿರತ್ನ ಕಾಳಿದಾಸ” ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿತು.