Home ಸುದ್ಧಿಗಳು ಪ್ರಾದೇಶಿಕ ವಿದ್ಯಾರ್ಥಿಗಳ ಮನಸ್ಥಿತಿಗೆ ತಕ್ಕಂತೆ ಶಿಕ್ಷಕರು ಮತ್ತು ಹೆತ್ತವರು ಬದಲಾಗಬೇಕಾಗಿದೆ: ಡಾ. ನಿಕೇತನ

ವಿದ್ಯಾರ್ಥಿಗಳ ಮನಸ್ಥಿತಿಗೆ ತಕ್ಕಂತೆ ಶಿಕ್ಷಕರು ಮತ್ತು ಹೆತ್ತವರು ಬದಲಾಗಬೇಕಾಗಿದೆ: ಡಾ. ನಿಕೇತನ

667
0

ಉದ್ಯಾವರ: ಇಂದಿನ ಆಧುನಿಕ ಕಾಲದಲ್ಲಿ ಮಕ್ಕಳ ಮನಸ್ಥಿತಿ ಬದಲಾಗಿದೆ. ಅದರಲ್ಲೂ ಕೋವಿಡ್ – 19 ಕಾರಣವಾಗಿ ಮಕ್ಕಳು ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಜಗತ್ತೆ ಒಂದು ಹಳ್ಳಿಯಾಗಿರುವ ಜಾಗತೀಕರಣದ ಸಂದರ್ಭದಲ್ಲಿ ಮಕ್ಕಳ ಮನಸ್ಥಿತಿಯು ಅದಕ್ಕೆ ಅನುಗುಣವಾಗಿ ಬೆಳೆಯುತ್ತಿದೆ. 

ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಹೆತ್ತವರು ಕೂಡ ತಮ್ಮ
ಮನೋಭಾವವನ್ನು ನವೀಕರಿಸಿಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮಕ್ಕಳ ಮನಸ್ಥಿತಿಯೊಂದಿಗೆ ಶಿಕ್ಷಕರ ಮನಸ್ಥಿತಿ ಘರ್ಷಿಸುವ ಹಂತ ತಲುಪಿದರೆ ಇದು ಮಕ್ಕಳ ಮನಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿ ಅವರ ಶಿಕ್ಷಣ ಕುಂಠಿತವಾಗುವ ಅಪಾಯವಿದೆ.

ಹಾಗಾಗಿ ಈ ಸಂದರ್ಭದಲ್ಲಿ ಶಿಕ್ಷಕರು ಎಚ್ಚರಿಕೆಯಿಂದ ತಮ್ಮ ನಡೆಯನ್ನು ಇಡಬೇಕಾಗಿದೆ. ಶಿಕ್ಷಕರು ಮಾನವೀಯ ಮೌಲ್ಯ ಕಳಕೊಂಡರೆ ಮಾನವೀಯ ಮೌಲ್ಯವಿರದ ಸಮಾಜ ನಿರ್ಮಾಣವಾಗುತ್ತದೆ ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವರ್ಷದ ಹರ್ಷ ನೂರರ್ವತ್ತೊಂದು ಸಮಾರಂಭದಲ್ಲಿ ಜರಗಿದ 5 ನೇ ತರಗತಿಯಿಂದ 7 ತರಗತಿ ತನಕದ ಬಹುಮಾನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಶಿಕ್ಷಕರದ್ದು ಒತ್ತಡದ ಬದುಕು. ಈ ಒತ್ತಡದ ನಡುವೆ ಕೆಲಸ ಮಾಡಬೇಕಾದರೆ ಮಕ್ಕಳ ಮೇಲಿನ ಪ್ರೀತಿಯಿಂದ ಈ ವೃತ್ತಿಗೆ ಬರಬೇಕು. ಹೆತ್ತವರು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಾಠೇತರ ಚಟುವಟಿಕೆಯೂ ಮುಖ್ಯವಾಗುತ್ತದೆ.

ಒಬ್ಬ ವಿದ್ಯಾರ್ಥಿಯನ್ನು ಬೆಳಸುವಲ್ಲಿ ಶಿಕ್ಷಕರು ನೀಡುವ ಮೌಲ್ಯ ಶಿಕ್ಷಣ ಪ್ರಧಾನ ಪಾತ್ರವನ್ನು ವಹಿಸುತ್ತಿದೆ. ಈ ಶಾಲೆ ಅದಕ್ಕೆ ಒತ್ತು ಕೊಡುತ್ತಿರುವುದು ಈ ಸಮಾರಂಭದಿಂದ ಸಾಬೀತಾಗಿದೆ ಎಂದರು.

ಸಮಾರಂಭದಲ್ಲಿ ಶುಭಾಶಂಸನೆಗೈದ ಶಾಲೆಯ ಹಳೆ ವಿದ್ಯಾರ್ಥಿ ಲೆಕ್ಕ ಪರಿಶೋಧಕ ಸಿಎ ಸುಭಾಶ್ಚಂದ್ರ
ಸಾಲಿಯಾನ್ ಅವರು, ಶಿಕ್ಷಣ ಎಂಬುದು ನಮ್ಮ ಜೀವನದಲ್ಲಿ ಬಹುಮುಖ್ಯವಾದುದು. ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂದು ಅರಿವಾಯಿತು ಇದು ಶಿಕ್ಷಣದ ಶಕ್ತಿ.

ಶಿಕ್ಷಣದೊಂದಿಗೆ ಪಾಠೇತರ ಚಟುವಟಿಕೆ ಕೂಡ ಅತಿ ಮುಖ್ಯ. ಪಾಠೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಷ್ಟು ಮಕ್ಕಳು
ಪಾಠವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆ ಮತ್ತು ಶಿಕ್ಷಕರೊಂದಿಗೆ ತನಗಿದ್ದ ಸಂಬಂಧ ಮತ್ತು ಅನುಭವನ್ನು ಹಂಚಿಕೊಂಡರು .

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಮಾತನಾಡುತ್ತಾ ಪೋಷಕರಿಗೆ ತಮ್ಮ ಮಕ್ಕಳನ್ನು ಒಂದು ಒಳ್ಳೆ ಸೌಕರ್ಯವನ್ನು ನೀಡುವ ಶಾಲೆಗೆ ಕಳುಹಿಸಬೇಕೆಂಬ ಆಸೆ ಇರುತ್ತದೆ. ಆ ನಿರೀಕ್ಷೆ ಸುಳ್ಳಾಗದಂತೆ ಈ ಶಾಲೆ ಆಂಗ್ಲ ಮಾಧ್ಯಮಕ್ಕೆ ಸರಿ ಸರಿಸಮನಾಗಿ ಸವಲತ್ತುಗಳನ್ನು ಕೊಡುತ್ತಿದೆ. ಇದರ ಹಿಂದೆ ಆಡಳಿತ ಸಮಿತಿಯ ಪರಿಶ್ರಮವಿದೆ.

ಉಚಿತ ಶಿಕ್ಷಣವನ್ನು ಒಂದು ಅನುದಾನ ಇರದ ಕನ್ನಡ ಮಾಧ್ಯಮದ ಶಾಲೆ ನೀಡುವುದು ಸುಲಭ ಸಾಧ್ಯವಲ್ಲ. ಮುಂದಿನ ದಿನಗಳಲ್ಲಿ ಹೆತ್ತವರು ಕೂಡ ಆಡಳಿತ ಸಮಿತಿಯೊಂದಿಗೆ ಕೈ ಜೋಡಿಸುವಂತೆ ಕರೆ ನೀಡಿದರು .

ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ
ಗಣಪತಿ ಕಾರಂತ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಡಾ. ತ್ರಿವೇಣಿ ವೇಣುಗೋಪಾಲ್ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದ ಪ್ರಾರಂಭದಲ್ಲಿ ಶಾಲಾ ಸಂಚಾಲಕರಾದ
ಸುರೇಶ್ ಶೆಣೈ ಅವರು ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಹೇಮಲತಾ ವರದಿ
ವಾಚಿಸಿದರು.

ವಿದ್ಯಾರ್ಥಿವೇತನದ ಪಟ್ಟಿಯನ್ನು ಶಿಕ್ಷಕಿ ಅನುರಾಧ ಶೆಟ್ಟಿ ಮತ್ತು ಬಹುಮಾನದ ಪಟ್ಟಿಯನ್ನು ಶಿಕ್ಷಕಿ ಸುಪ್ರಿಯ ವಾಚಿಸಿದರು. ಶಿಕ್ಷಕಿ ನಾಜಿರಾ ವಂದಿಸಿದರು.

ಶಿಕ್ಷಕ ವಿಕ್ರಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮನೋರಂಜನೆ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಮತ್ತು ಮಕ್ಕಳ ನಾಟಕ “ಬೆಳಕು ಹಂಚಿದ ಬಾಲಕ” (ರಚನೆ : ಆರ್.ವಿ . ಭಂಡಾರಿ , ನಿರ್ದೇಶನ- ಉದ್ಯಾವರ ನಾಗೇಶ್ ಕುಮಾರ್, ಸಹ ನಿರ್ದೇಶನ- ಯು. ಯಜ್ಞೇಶ್ವರ ಆಚಾರ್ಯ) ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.