ಉಡುಪಿ, ಜೂ.12: ಮುಂಗಾರು ಮಳೆಯಲ್ಲಿ ನೆರೆ ಸೇರಿದಂತೆ ಮತ್ತಿತರ ಅವಘಡಗಳಿಂದ ಜನ ಜಾನುವಾರುಗಳಿಗೆ ಸಾವು ನೋವುಗಳು ಆಗದಂತೆ ಹಾಗೂ ಆಸ್ತಿ ಹಾನಿ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೆಲಸ ಕಾರ್ಯಗಳನ್ನು ಅರಸಿ ಜನ ಸಾಮಾನ್ಯರು ಕಚೇರಿಗಳಿಗೆ ಭೇಟಿ ನೀಡಿದಾಗ ಸ್ಪಂದಿಸಿ, ನಿಯಮಾನುಸಾರ ಕೆಲಸಗಳನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿಯೂ ಸಹ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ಮಳೆಯಿಂದ ನೆರೆ ಸೇರಿದಂತೆ ಮತ್ತಿತರ ಅವಘಡಗಳಿಂದ ಜನ-ಜಾನುವಾರುಗಳು ಸಾವು- ನೋವು ಹಾಗೂ ಹೆಚ್ಚಿನ ಆಸ್ತಿ ಹಾನಿಯಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು
ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈಗಾಗಲೇ ಸಿಡಿಲು ಬಡಿತದಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಜನ ಸಾಮಾನ್ಯರಿಗೆ ಸಿಡಿಲು ಬಡಿತದಿಂದ ರಕ್ಷಣೆ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ ಆದಷ್ಟು ತ್ವರಿತವಾಗಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಗೆ ಸಿಇಒಗೆ ಸೂಚನೆ ನೀಡಿದ ಸಚಿವರು, ಉಡುಪಿ ನಗರ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯದ ಸಮಸ್ಯೆ ಕಳೆದ ಬಾರಿ ಉಂಟಾಗಿದ್ದು, ಈ ಬಾರಿ ಅಂತಹ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಕೈಗೊಳ್ಳಬೇಕು. ಕುಡಿಯುವ ನೀರಿನೊಂದಿಗೆ ಮಳೆ ನೀರು ಸೇರಿದಂತೆ ಕಲುಷಿತ ನೀರು ಮಿಶ್ರಣಗೊಳ್ಳದಂತೆ ಕ್ರಮವಹಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು ಎಂದರು. ಗ್ರಾಮೀಣ ಭಾಗದ ಜನರು ಹಳ್ಳಕೊಳ್ಳ ದಾಟಲು ಕಾಲುಸಂಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಬಾರಿ ಆದ್ಯತೆ ಮೇರೆಗೆ ಕಾಲು ಸಂಕಗಳನ್ನು ನಿರ್ಮಿಸಬೇಕು. ಜಿಲ್ಲೆಯಲ್ಲಿ ಮುಂಗಾರುವಿನಲ್ಲಿ 35,509 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಅಗತ್ಯ ಇರುವ ಬಿತ್ತನೆ ಬೀಜಗಳನ್ನು, ರಸಗೊಬ್ಬರ, ದಾಸ್ತಾನುಗಳನ್ನು ಇಟ್ಟುಕೊಂಡು, ರೈತರಿಗೆ ಸಮರ್ಪಕವಾಗಿ ವಿತರಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಂ 4 ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಕೇಳಿ ಬರುತ್ತಿದೆ. ಹೊರ ಜಿಲ್ಲೆಗಳಲ್ಲಿ ಈ ಭತ್ತದ ತಳಿಯ ಬೀಜಗಳು ಲಭ್ಯವಿದ್ದರೆ, ತರಿಸಿಕೊಡಬೇಕು. ಕಡಲಕೊರೆತ ತಡೆಗೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಸರಕಾರ ತಾತ್ಕಾಲಿಕ ಕಡಲ ಕೊರೆತ ನಿವಾರಣೆಗೆ ಜಿಲ್ಲೆಗೆ 5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಜನ ಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತೀ ಮನೆಗೆ ನಳ ಸಂಪರ್ಕ ಕಲ್ಪಿಸಿರುವ ಕಾಮಗಾರಿ, ಈಗಾಗಲೇ ನಳ ಸಂಪರ್ಕ ಕಲ್ಪಿಸಿರುವ ಮನೆಗಳಿಗೆ ನೀರು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ನಳ ಕಲ್ಪಿಸಿರುವ ಪ್ರತಿಶತಃ ನೂರರಷ್ಟು ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಆಗಬೇಕು. ಸ್ಥಳೀಯವಾಗಿ ಲಭ್ಯವಾಗುವ ನೀರಿನ ಮೂಲಗಳ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಕಿಂಡಿ ಆಣೆಕಟ್ಟು ನಿರ್ಮಾಣದಿಂದಾಗಿ ಪಶ್ಚಿಮಾಭಿಮುಖವಾಗಿ ಮಳೆಯ ನೀರು ಹರಿದು ಸಮುದ್ರ ಸೇರಿ ಸಿಹಿನೀರು ವ್ಯರ್ಥವಾಗಬಾರದೆಂಬ ಉದ್ದೇಶ ಇದ್ದು, ಕಳೆದ ಸಾಲಿನಲ್ಲಿ ಸೆಪ್ಟಂಬರ್ ಮಾಹೆಯಲ್ಲಿ ಹಲಗೆಗಳ ಅಳವಡಿಕೆಯಿಂದಾಗಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕೊಂಚ ತಪ್ಪುವುದರ ಜೊತೆಗೆ ಅಂತರ್ಜಲ ಮಟ್ಟವು ಹೆಚ್ಚಿದೆ. ಈಗ ಮಳೆ ಆರಂಭವಾದ ಹಿನ್ನೆಲೆ ಅವುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯಬೇಕು. ಮಳೆಗಾಲ ನೋಡಿಕೊಂಡು ಸೆಪ್ಟಂಬರ್‌ನಲ್ಲಿ ಅವಶ್ಯವಿದ್ದಲ್ಲಿ ಈ ವರ್ಷವೂ ಸಹ ಹಲಗೆಗಳನ್ನು ಅಳವಡಿಸಬೇಕು ಎಂದರು. ಜಿಲ್ಲೆಗೆ ಹೊಸದಾಗಿ ಪ್ರಸಕ್ತ ಸಾಲಿನಿಂದ ಮೂರಕ್ಕೂ ಹೆಚ್ಚು ಹೊಸ ವಿದ್ಯಾರ್ಥಿನಿಲಯಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಅಗತ್ಯವಿರುವ ಕಟ್ಟಡಗಳನ್ನು ಗುರುತಿಸಿ, ಪ್ರಸಕ್ತ ಸಾಲಿನ ಆರಂಭದಿಂದಲೇ ಚಾಲ್ತಿ ಆಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಿಂದಾಗ್ಗೆ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕೆಂದು ಸೂಚನೆ ನೀಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಳೆದ ಬಾರಿ 17 ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಮೊದಲ ಸ್ಥಾನ ಅಲಂಕರಿಸಿದೆ. ಇದಕ್ಕೆ ಶಿಕ್ಷಣ ಇಲಾಖೆಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ 143 ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ ಹೆಚ್ಚು ಶಾಲೆಗಳಿಗೆ ಈ ರೀತಿಯ ಫಲಿತಾಂಶ ಬರಬೇಕು. ಶಾಲಾ-ಕಾಲೇಜುಗಳು, ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿ.ಇ.ಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಡಿಎಫ್‌ಓ ಗಳಾದ ಗಣಪತಿ ಹಾಗೂ ಶಿವರಾಂ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.