Home ಸುದ್ಧಿಗಳು ಪ್ರಾದೇಶಿಕ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ: 15 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ: 15 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ

168
0

ಉಡುಪಿ, ಫೆ.24: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಸಂಸ್ಥೆಯ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲೆಯ ಸುಮಾರು 40 ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ 266 ವಿದ್ಯಾರ್ಥಿನಿಯರಿಗೆ 15 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಶನಿವಾರ ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ವಿತರಿಸಲಾಯಿತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಲಬಾರ್ ಗೊಲ್ಡ್ ಅರ್ಹರಿಗೆ ಎಲ್ಲ ರೀತಿಯಲ್ಲೂ ಸಹಾಯ ನೀಡುತ್ತಿದೆ. ಮನೆ ನಿರ್ಮಾಣ, ರೋಗಿಗಳಿಗೆ ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದೆ ಎಂದು ಹೇಳಿದರು. ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಬಗ್ಗೆಯೂ ನಾವು ಯೋಚನೆ ಮಾಡಬೇಕು. ಮಲಬಾರ್ ಗೋಲ್ಡ್ ನೀಡಿದ ವಿದ್ಯಾರ್ಥಿವೇತನದಿಂದ ಭವಿಷ್ಯದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಪಡೆಯುವ ವಿದ್ಯಾರ್ಥಿಗಳು ಮುಂದೆ ಸಮಾಜದ ಬಗ್ಗೆಯೂ ಚಿಂತನೆ ಮಾಡಬೇಕು. ಆಗ ಇದೇ ರೀತಿಯ ನೆರವಿನ ನಿರೀಕ್ಷೆಯನ್ನು ಸಮಾಜ ಕೂಡ ನಿಮ್ಮಿಂದ ಮಾಡುತ್ತಿರುತ್ತದೆ ಎಂದರು.

ಮಕ್ಕಳಲ್ಲಿರುವ ಶಕ್ತಿ, ಕೌಶಲ್ಯಗಳು ಸಮಾನತೆಯನ್ನು ಮೂಡಿಸಲ್ಲ. ನಾವೆಲ್ಲ ಒಂದಾಗಿರಬೇಕೆಂಬ ಬದ್ಧತೆಯೇ ಮಕ್ಕಳಲ್ಲಿರುವ ನಿಜವಾದ ಸಮಾನತೆ ಆಗಿದೆ. ಜಾತಿ ಧರ್ಮ ಮೀರಿದ ಸಂಬಂಧವೇ ಮಕ್ಕಳಲ್ಲಿ ಶಾಶ್ವತವಾಗಿರುತ್ತದೆ. ಆ ಸಂಬಂಧ ಸಮಾಜದ ಮುಂದಿನ ಪೀಳಿಗೆಗೂ ಉಳಿಯಲಿ ಎಂದು ಅವರು ಹಾರೈಸಿದರು. ಮಲಬಾರ್ ಚಾರಿಟೇಬಲ್ ಟ್ರಸ್ಟ್‌ನ ಹಸಿವು ಮುಕ್ತ ಜಗತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಮಾತನಾಡಿ, ಹಸಿವು ಮುಕ್ತ ಜಗತ್ತು ಬಹಳ ಉತ್ತಮ ಕಾರ್ಯಕ್ರಮವಾಗಿದ್ದು, ಇದೇ ರೀತಿಯ ಕಾರ್ಯಕ್ರಮ ಇನ್ನಷ್ಟು ಸಂಸ್ಥೆಗಳು ಮಾಡಿದರೆ ಇಡೀ ಜಗತ್ತನ್ನು ಹಸಿವು ಮುಕ್ತ ಮಾಡಬಹುದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ನಿವೃತ್ತ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೋ, ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ನಿತ್ಯಾನಂದ ಒಳಕಾಡು, ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪ್ರಾದೇಶಿಕ ಸಿಎಸ್‌ಆರ್ ಉಸ್ತುವಾರಿ ಹೈದರ್ ಕೆ.ಎ., ಪ್ರಮುಖರಾದ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ವಾಲು ಸ್ವಾಗತಿಸಿ, ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.