ಮಣಿಪಾಲ, ಫೆ. 12: ನಮ್ಮೊಳಗಿನ ಭಾವನೆ, ಮನಸ್ಸನ್ನು ನಾವೇ ನಿಯಂತ್ರಿಸಬೇಕು. ಇದರ ಕೀಲಿಕೈ ಇನ್ನೊಬ್ಬರಿಗೆ ಕೊಡಬಾರದು. ಪ್ರತಿ ವಿಷಯದಲ್ಲೂ ವೈಯಕ್ತಿಕವಾಗಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವ ಮೂಲಕ ಕುಟುಂಬದಲ್ಲೂ ಸಕಾರಾತ್ಮಕತೆ ರೂಪಿಸುತ್ತ ಹೋಗಬೇಕು. ಈ ಪ್ರಕ್ರಿಯೆ ಮುಂದುವರಿದಂತೆ ಸಮಾಜದಲ್ಲೂ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಅವರು ಹೇಳಿದರು. ಅವರು ಮಣಿಪಾಲ ಶಾಖೆಯ ವತಿಯಿಂದ ರವಿವಾರ ಮಣಿಪಾಲದ ಎಂಜೆಸಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಅಪರಿಮಿತ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ’ ಎಂಬ ಕಾರ್ಯಕ್ರಮದಲ್ಲಿ ಸ್ಫೂರ್ತಿದಾಯಕ ಪ್ರವಚನ ನೀಡಿದರು.
ನಾವು ಮಾಡುವ ಕಾರ್ಯದಲ್ಲಿ ಪರಿಪೂರ್ಣತೆಯನ್ನು ರೂಢಿಸಿಕೊಳ್ಳಬೇಕು. ಪರಿಪೂರ್ಣತೆಯಿದ್ದಂತೆ ಸಕಾರಾತ್ಮಕ ಚಿಂತನೆಗಳು ನಮ್ಮೆಡೆಗೆ ಬರುತ್ತವೆ. ಇನ್ನೊಬ್ಬರ ಕಾರಣದಿಂದ ನಮ್ಮೊಳಗೆ ನಾವು ಒತ್ತಡ ತಂದುಕೊಳ್ಳಬಾರದು. ಇನ್ನೊಬ್ಬರಿಗೆ ನಾವೂ ಒತ್ತಡ ನೀಡಬಾರದು. ನಿತ್ಯ ಜೀವನದ ವ್ಯವಹಾರಿಕ ವಿಷಯಗಳು ನಮ್ಮ ಒತ್ತಡ ಹೆಚ್ಚಿಸದಂತೆ ನೋಡಿಕೊಳ್ಳಬೇಕು. ಎಲ್ಲ ಕಾಯಿಲೆಗಳನ್ನು ಬಗೆಹರಿಸಲು ವೈದ್ಯರು ಸಿಗುತ್ತಾರೆ. ಆದರೆ, ನಮ್ಮೊಳಗೆ ಭಾವನಾತ್ಮಕವಾಗಿ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ನಾವೇ ವೈದ್ಯರಾಗಬೇಕು. ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಬೇಕು. ಸಾಗುತ್ತಿರುವ ಮಾರ್ಗ ಸರಿಯಿಲ್ಲ ಎಂದಾಗ ತತ್‌ಕ್ಷಣವೇ ಯು- ಟರ್ನ್ ತೆಗೆದುಕೊಂಡು ಸರಿಯಾದ ಮಾರ್ಗದಲ್ಲಿ ಸಾಗಬೇಕು ಎಂದರು.
ಪರೀಕ್ಷೆಯಲ್ಲಿ ಗಳಿಸುವ ಅಂಕದ ಕಾರಣಕ್ಕೆ ಎಲ್ಲವೂ ಸಾಧ್ಯವಾಗುತ್ತದೆ ಎಂದೇನೂ ಇಲ್ಲ. ಹೀಗಾಗಿ ಅಂಕಗಳ ಮೇಲೆ ಗಮನ ಮಾಡದೇ ಅವರಲ್ಲಿ ಪರೀಕ್ಷೆ ಭಯ ದೂರ ಮಾಡಬೇಕು. ವೃತ್ತಿಪರ ಏಳೆಯ ಜತೆಗೆ ವೈಯಕ್ತಿಕ ಎಳೆಯೂ ಅತಿ ಮುಖ್ಯ. ವೈಯಕ್ತಿಕವಾಗಿ ನಾವು ಬೆಳೆಯಬೇಕಾದರೆ ಬೌದ್ಧಿಕವಾಗಿ ಬೆಳೆಯಬೇಕು. ಮಕ್ಕಳಲ್ಲಿ ಸಕಾರಾತ್ಮಕ ಬೌದ್ಧಿಕತೆ/ ಚಿಂತನೆ ತುಂಬಬೇಕು ಎಂದು ಸಲಹೆ ನೀಡಿದರು. ಶಾಸಕ ಯಶ್‌ಪಾಲ್ ಎ. ಸುವರ್ಣ, ಐಎಂಎ ಉಡುಪಿ ಶಾಖೆ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಮನೋವೈದ್ಯ ವಿರೂಪಾಕ್ಷ ದೇವರಮನೆ, ಎಂಎಂಎನ್‌ಎಲ್ ನ ವನಿತಾ ಜಿ. ಪೈ, ಆಭರಣ ಸಮೂಹ ಸಂಸ್ಥೆಯ ಸಂಧ್ಯಾ ಕಾಮತ್, ಉದ್ಯಮಿಗಳಾದ ಅಜಯ್ ಪಿ. ಶೆಟ್ಟಿ, ರಮೇಶ್ ಬಂಗೇರ, ಬ್ರಹ್ಮಕುಮಾರೀಸ್ ಮಣಿಪಾಲ ಶಾಖೆಯ ಸಂಚಾಲಕಿ ಬಿ.ಕೆ.ಸೌರಭಾ, ಬಿ.ಕೆ. ಸುಜಾತಾ ಉಪಸ್ಥಿತರಿದ್ದರು. ಶ್ರೀನಿಧಿ ನಿರೂಪಿಸಿದರು.