ಕೋಟ, ಡಿ.27: ಯಕ್ಷಗಾನಕ್ಕೆ ಒಂದು ತಾರಾ ಮೆರುಗು ತಂದುಕೊಟ್ಟು, ಯಕ್ಷಗಾನದ ಪರಿಚಯವೂ ಇಲ್ಲದ ಪ್ರದೇಶಗಳಲ್ಲಿಯೂ ಯಕ್ಷಗಾನದ ಮಹತ್ವವನ್ನು ತಮ್ಮ ಗಾಯನದ ಮೂಲಕ ಸಾರಿದ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದ ಅಲ್ಲದೆ ಯಕ್ಷರಂಗಕ್ಕೆ ಬರುವ ಯುವ ಕಲಾವಿದರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿ ಅವರಿಗೊಂದು ಕಲಾ ನೆಲೆಯನ್ನು ಒದಗಿಸಿಕೊಟ್ಟವರು ಕಾಳಿಂಗ ನಾವಡರು. ಪ್ರಸಿದ್ಧ ಭಾಗವತರಾದರೂ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬೆಳೆದು ಬಂದಂತ ಕಲಾವಿದ ಕಾಳಿಂಗ ನಾವಡರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಭಾಗವತರು ಹಾಗೂ ಪ್ರಸಂಗಕರ್ತ ಸುರೇಶ್‌ರಾವ್ ಬಾರ್ಕೂರು ಇವರಿಗೆ ಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ವೇದ ಬ್ರಹ್ಮಶ್ರೀ ಅನಂತ ಪದ್ಮನಾಭ ಐತಾಳ ಹೇಳಿದರು. ಕೋಟದ ಹಂದಟ್ಟು ಉರಾಳಕೇರಿಯ ವೇದಿಕೆಯಲ್ಲಿ ನಡೆದ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಪ್ರತಿಷ್ಟಿತ 2023ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳ, ಗಣಪಯ್ಯ ಉರಾಳ, ಕಲಾಕದಂಬದ ಅಧ್ಯಕ್ಷ ಅಂಬರೀಶ್ ಭಟ್ ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಕಲಾವಿದರಿಂದ ಗಾನ ವೈಭವ ಹಾಗೂ ಅತಿಥಿ ಕಲಾವಿದರುಗಳಿಂದ ‘ಶರಸೇತು ಬಂಧನ’ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು. ಮುರಳೀಧರ ನಾವಡ, ವಿಶ್ವನಾಥ ಉರಾಳ, ಧನಂಜಯ ನಾವಡ, ಅದಿತಿ ಉರಾಳ, ಸುದರ್ಶನ ಉರಾಳ ಹಾಗೂ ಮಂಜು ಉರಾಳ ಸಹಕರಿಸಿದರು.