ಉಡುಪಿ, ನ.27: ವಸುದೈವ ಕುಟುಂಬಕಂ ಪರಿಕಲ್ಪನೆಯ ಮೂಲಕ ಎಲ್ಲ ಭಾಷೆಗಳನ್ನು ಗೌರವಿಸುವ ಮತ್ತು ಪರಿಚಯಿಸುವ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಿರ್ಗಾನದ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ವಾಗ್ಮಿ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ, ಜೀವನದ ಎಲ್ಲ ಹಂತಗಳಲ್ಲಿ ಹೋರಾಟ ಇರುತ್ತದೆ. ಕಠಿಣ ಪರಿಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ, ಬಂದ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿ. ಆಗ ಯಶಸ್ಸು ಹಿಂಬಾಲಿಸಿ ಬರುತ್ತದೆ. ಸಾಧಕರ ಸಾಧನೆಗಳು ಕೇಳಲು ರೋಮಾಂಚನ ಉಂಟುಮಾಡುತ್ತದೆ. ಆದರೆ ಅದರ ಹಿಂದೆ ಬಹುದೊಡ್ಡ ತ್ಯಾಗವಿರುತ್ತದೆ. ಅದು ಕ್ರಿಯೇಟಿವ್ ನ ವಿದ್ಯಾರ್ಥಿಗಳಿಂದ ಸಾಧ್ಯವಾಗಲಿ ಎಂದು ಹಾರೈಸಿದರು. ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ‘ಸಾಧಕ ಪುರಸ್ಕಾರ’ ನೀಡಲಾಯಿತು. ಕ್ರಿಯೇಟಿವ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರಾಜ್ಯದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಸಂಸ್ಥೆಯ ಸಾಧನೆಗಳನ್ನು ತಿಳಿಸುವ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಡಾ. ಗಣನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯೇಟಿವ್ ಕಾಲೇಜು ಪ್ರಾರಂಭವಾದ ಮೂರೇ ವರ್ಷದ ಅವಧಿಯಲ್ಲಿ ಅನೇಕ ಹೊಸ ಸಾಧನೆಗಳನ್ನು ಮಾಡಿದೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನವಚೇತನ ನೀಡುವ ಕಾರ್ಯ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕಲೆ, ಸಂಸ್ಕೃತಿಯ ಮೂಲಕ ಶ್ರೀಮಂತ ಮೌಲ್ಯಗಳನ್ನು ತಿಳಿಸಲಾಗುತ್ತದೆ ಎಂದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಅಮೃತ್ ರೈ, ಆದರ್ಶ ಎಂ. ಕೆ., ಹೆಚ್.ಕೆ.ಎಸ್ ನ ಪ್ರಾಂಶುಪಾಲರಾದ ವಿಮಲ್ ರಾಜ್. ಜಿ., ಗಣಪತಿ ಕೆ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ ಕಾರ್ಯಕ್ರಮ ನಿರೂಪಿಸಿದರು. ‘ಸಾಧಕರ ಸನ್ಮಾನ’ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ವಿನಾಯಕ ಜೋಗ್ ವಂದನಾರ್ಪಣೆಗೈದರು.