ಉಡುಪಿ, ನ.8: ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಪೋಷಕತ್ವ ಯೋಜನೆ, ದತ್ತು ಕಾರ್ಯಕ್ರಮ ಹಾಗೂ ಮಮತೆಯ ತೊಟ್ಟಿಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪೋಷಕತ್ವ ಕಾರ್ಯಕ್ರಮ ಯೋಜನೆ: ಬಾಲನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಕುಟುಂಬಗಳಿಗೆ ಮರು ಸೇರ್ಪಡೆಗೊಳಿಸಲು ಸಾಧ್ಯವಾಗದ ದತ್ತು ಮುಕ್ತವಾಗದ ಮತ್ತು ದತ್ತು ಹೋಗಲು ಸಾಧ್ಯವಾಗದ, 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಪೋಷಕತ್ವ ಯೋಜನೆ ಮುಖಾಂತರ ಮಗುವಿನ ಜೈವಿಕ ಪೋಷಕರಲ್ಲದ ಕುಟುಂಬಗಳಲ್ಲಿ ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಸುವ ಪರ್ಯಾಯ ಪೋಷಣಾ ಯೋಜನೆಯಾಗಿದೆ. ಪ್ರತಿಯೊಂದು ಮಗುವಿಗೂ ಕುಟುಂಬದ ವಾತಾವರಣದಲ್ಲಿ ಬೆಳೆಯುವ ಹಕ್ಕಿದ್ದು, ವಿವಿಧ ಕಾರಣಗಳಿಂದ ಕೆಲವು ಮಕ್ಕಳನ್ನು ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಸರ್ಕಾರಿ/ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಗುವನ್ನು ಮಗುವಿನ ಸ್ವಂತ ಕುಟುಂಬದಲ್ಲಿ ಇರಿಸಲು ಸಾಧ್ಯವಾಗದಿದ್ದಾಗ ಅಂತಹ ಮಕ್ಕಳಿಗೆ ಪೋಷಕತ್ವ ಯೋಜನೆಯಡಿಯಲ್ಲಿ ಇತರ ಕುಟುಂಬದಲ್ಲಿ ಬೆಳೆಯಲು ಅವಕಾಶವಿದೆ.
ಮಕ್ಕಳನ್ನು ಪೋಷಕತ್ವ ಯೋಜನೆಯಡಿಯಲ್ಲಿ ಪೋಷಿಸಲು ಆಸಕ್ತಿ ಇರುವ ಪೋಷಕರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ದೂರವಾಣಿ ಸಂಖ್ಯೆ:0820-2574964 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹದಾಗಿದೆ.
ದತ್ತು ಕಾರ್ಯಕ್ರಮ: ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆಯು ಕುಟುಂಬದ ಪ್ರೀತಿ ವಂಚಿತ ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಕಾರ್ಯಕ್ರಮ. ಇಂತಹ ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಕಾರ್ಯಕ್ರಮ ನೆರವಾಗುತ್ತಿದೆ.
ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಯ ಅನ್ವಯ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ಮಾತ್ರ ದತ್ತು ನೀಡಲು ಅರ್ಹರಾಗಿರುತ್ತಾರೆ. ಅನಧಿಕೃತ ದತ್ತು ಪ್ರಕ್ರಿಯೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 81 ರನ್ವಯ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಶಾಮೀಲಾಗಿದ್ದಲ್ಲಿ 1 ಲಕ್ಷ ರೂ. ದಂಡ ಹಾಗೂ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡವರಿಗೆ 1 ಲಕ್ಷ ರೂ. ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://cara.wcd.gov.inಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ: 0820-2574964 ಅಥವಾ ದತ್ತು ಕೇಂದ್ರ ಶ್ರೀ ಕೃಷ್ಣಾನುಗೃಹ ಮಲ್ಪೆ, ಆಶೀರ್ವಾದ್ ರಸ್ತೆ, ಸಂತೆಕಟ್ಟೆ ದೂರವಾಣಿ ಸಂಖ್ಯೆ:9880442640ಗೆ ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಮಮತೆಯ ತೊಟ್ಟಿಲು: ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳನ್ನು ಉಡುಪಿಯ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್ ಶೆಟ್ಟಿ), ಮಲ್ಪೆಯ ಶ್ರೀಕೃಷ್ಣಾನುಗೃಹ ದತ್ತು ಕೇಂದ್ರ ಮಲ್ಪೆ ಹಾಗೂ ನಿಟ್ಟೂರಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿ ಮಕ್ಕಳನ್ನು ಬಿಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.