ಉಡುಪಿ, ಅ.17: ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಮೂಲಸೌಕರ್ಯ, ಸ್ವಚ್ಛತೆ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ರೈಲ್ವೇ ಪ್ರಯಾಣಿಕರ ಮನವಿಯ ಮೇರೆಗೆ ಉಡುಪಿ ಅಧಿಕಾರಿಗಳೊಂದಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲ್ವೇ ನಿಲ್ದಾಣದ ಹೊರಾಂಗಣ ಹಾಗೂ ಇಂದ್ರಾಳಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯ ಇಕ್ಕೆಲಗಳ ಸ್ವಚ್ಛತೆ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ತಂಗುದಾಣ ವ್ಯವಸ್ಥೆ, ಹಳಿ ದಾಟುವ ಓವರ್ ಪಾಸ್ ಸೇತುವೆ ಮೇಲ್ಛಾವಣಿ ದುರಸ್ತಿ, ಸಮರ್ಪಕ ದಾರಿದೀಪ ವ್ಯವಸ್ಥೆ, ಪ್ರಯಾಣಿಕರಿಗೆ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ರೈಲ್ವೇ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಶೀಘ್ರದಲ್ಲಿಯೇ ರೈಲ್ವೇ ಸಚಿವರನ್ನು ಭೇಟಿಯಾಗಿ ಇಂದ್ರಾಳಿ ನಿಲ್ದಾಣದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮನವಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈಲೈ ನಿಲ್ದಾಣದ ಸಹಾಯಕ ಪ್ರಬಂಧಕರಾದ ಜಿ. ಡಿ. ಮೀನಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಪೌರಾಯುಕ್ತರಾದ ರಾಯಪ್ಪ, ನಗರಸಭಾ ಸದಸ್ಯರುಗಳಾದ ಅಶೋಕ್ ನಾಯ್ಕ್, ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ರಾಜು, ಪ್ರಮುಖರಾದ ಅರವಿಂದ್ ಶೆಟ್ಟಿ, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.