ಉಡುಪಿ, ಅ.3: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ 154ನೇ ವರ್ಷದ ಸ್ಮರಣಾರ್ಥ ‘ಸನ್ಮತಿ ಮಂಥನ – ಜ್ಞಾನ ಪ್ರಸಾರಣ’ ವಿಶೇಷ ಕಾರ್ಯಕ್ರಮವು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷರಾದ ಸಂಜೀವ ಕಾಂಚನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಾಂಧೀಜಿಯವರು ತಾ.25-02-1934ರಂದು ದ.ಕ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಬಳಸಿದ ಚರಕದ ರಾಟೆಗೆ ಖಾದಿ ನೂಲಿನ ಹಾರ ಹಾಕಿ, ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಲಾಯಿತು.
ಕಾರ್ಯಕ್ರಮದಲ್ಲಿ ‘ಒಪ್ಪಿಕೊ ಪಚ್ಚೆವನಸಿರಿ ಜಾಗೃತಿ ಅಭಿಯಾನ’ ಹಿನ್ನೆಲೆಯಲ್ಲಿ 154 ಮರ ಗಿಡಗಳ ಸಸ್ಯ ಸಂಪದವನ್ನು ವಿತರಿಸಲಾಯಿತು. ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್.ಎ ಕೃಷ್ಣಯ್ಯ ಸಂಪನ್ಮೂಲ ವ್ಯಕ್ತಿಯಾಗಿ ಗಾಂಧೀಜಿಯವರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಬಡಗಬೆಟ್ಟು ಸೊಸೈಟಿಯಲ್ಲಿ ಸುಮಾರು 28 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಿರಿಯ ಗುಮಾಸ್ತರಾಗಿ ಸ್ವಯಂ ನಿವೃತ್ತಿ ಹೊಂದಿದ ಜಯಂತ್ ಕೆ. ಹಾಗೂ ಸುಮಾರು 3 ವರ್ಷಗಳ ಕಾಲ ಚಾಲಕ/ಅಟೆಂಡರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಹೊಂದಿದ ರಂಜಿತ್ ಅಮೀನ್ ಇವರನ್ನು ಬೀಳ್ಕೊಡಲಾಯಿತು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸೊಸೈಟಿಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಜಯಕರ ಶೆಟ್ಟಿ ಇಂದ್ರಾಳಿ, ಸಮಾಜ ಸೇವಕರಾದ ವಿಶ್ವನಾಥ ಶೆಣೈ, ಸೊಸೈಟಿಯ ಉಪಾಧ್ಯಕ್ಷರಾದ ಎಲ್. ಉಮಾನಾಥ, ಶತಮಾನೋತ್ಸವ ಸಮಿತಿ ಸಂಚಾಲಕರಾದ ಪುರುಷೋತ್ತಮ ಶೆಟ್ಟಿ, ಸೊಸೈಟಿಯ ನಿರ್ದೇಶಕ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೊಸೈಟಿಯ ಸಿಬ್ಬಂದಿ ವರ್ಗ ಹಾಗೂ ಉಡುಪಿಯ ಲಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮುಂತಾದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನೆರವೇರಿತು.. ಸೊಸೈಟಿಯ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕರಾದ ನವೀನ್ ಕೆ. ನಿರೂಪಿಸಿ, ಶಾಖಾ ವ್ಯವಸ್ಥಾಪಕರಾದ ಪ್ರವೀಣ್ ಬಲ್ಲಾಳ್ ವಂದಿಸಿದರು.