ಉಡುಪಿ, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಬಿಕಾಂ ಮತ್ತು ಬಿಬಿಎ ಪದವಿ ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿಯ ಕೈಗಾರಿಕಾ ಕೇಂದ್ರದ ಭೇಟಿ ಶೀರ್ಷಿಕೆ ಅಡಿಯಲ್ಲಿ ಉಪ್ಪೂರಿನ ನಂದಿನಿ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು ಐ.ಎಸ್.ಓ 22000 ಪ್ರಮಾಣಿಕೃತ ಸಂಸ್ಥೆಯಾಗಿದ್ದು ಗೋವಿನಿಂದ ಗ್ರಾಹಕರವರೆಗಿನ ಎಲ್ಲಾ ಹಂತಗಳಲ್ಲಿಯೂ ಗುಣಮಟ್ಟವನ್ನು ಕಾಯ್ದುಕೊಂಡು ಕೃಷಿಕರಿಗೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ.
ಉಪ್ಪೂರಿನ ನಂದಿನಿ ಘಟಕದಲ್ಲಿನ ಹಾಲು ಮತ್ತು ಹಾಲಿನ ಉತ್ಪನ್ನದ ತಯಾರಿ, ಮತ್ತು ಮಾನವ ಸಂಪನ್ಮೂಲ ವ್ಯವಸ್ಥೆ, ಮಾರುಕಟ್ಟೆ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಕುರಿತು ವಿವರವಾದ ಮಾಹಿತಿಯನ್ನು ನಂದಿನಿ ಘಟಕ ಉಪ್ಪೂರಿನ ಮಾರುಕಟ್ಟೆ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನದ ವ್ಯವಸ್ಥಾಪಕ ಅಧಿಕಾರಿಗಳು ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಬಿಂದು ಟಿ., ವ್ಯವಹಾರಶಾಸ್ತ್ರ ಅಧ್ಯಯನ ಮುಖ್ಯಸ್ಥರಾದ ಡಾ. ರಘು ನಾಯ್ಕ, ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕ ಡಾ. ಉದಯ ಕುಮಾರ್, ಸಹಾಯಕ ಪ್ರಾಧ್ಯಾಪಕ ದಿನೇಶ್ ಉಪಸ್ಥಿತರಿದ್ದರು.