ಕಲ್ಯಾಣಪುರ, ಸೆ.28: ಉಡುಪಿ ಕಲ್ಯಾಣಪುರ ಶ್ರೀ ರಾಮಾಂಜನೇಯ ದೇವಸ್ಥಾನದ ವೇದಮೂರ್ತಿ ಕಾಶೀನಾಥ್ ಭಟ್ ಇವರು ಕಳೆದ 35 ವರ್ಷಗಳಿಂದ ಅನಂತ ಚತುರ್ದಶಿ ಪ್ರಯುಕ್ತ ಪೂಜೆಗೆ ಅಗತ್ಯವಾದ ಶೇಷನಾಗವನ್ನು ವಿಶೇಷವಾಗಿ ದರ್ಬೆಯನ್ನು ಉಪಯೋಗಿಸಿ ಏಳು ಹೆಡೆಯ ನಾಗದೇವರ ಬಿಂಬ ಸ್ವರೊಪದ ಕಲಾಕೃತಿ ರಚನೆ ಮಾಡುತ್ತಿದ್ದು, ಉಡುಪಿಯ ಆಸುಪಾಸಿನ ದೇವಳಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.
ತಂದೆಯಿಂದ ಕಲಿತರು: ಇವರ ತಂದೆ ಹರಿನಾರಾಯಣ ಭಟ್ಟರಿಂದ ಇವರು ಈ ಕಲಾಕೃತಿ ರಚನೆಯನ್ನು ಕಲಿತರು. ಅಗತ್ಯವಿರುವ ದರ್ಬೆಗಳನ್ನು ಕೆಮ್ಮಣ್ಣಿನಿಂದ ತಂದು 15 ದಿನಗಳ ಕಾಲ ನಿರಂತರ ದರ್ಬೆಗಳನ್ನು ಸಮತಟ್ಟುಗೊಳಿಸಿ ಹೆಣೆದು 2 ಅಡಿ ಎತ್ತರದ ಏಳು ಹೆಡೆಯ ನಾಗದೇವರ ಬಿಂಬ ಸ್ವರೂಪದ ಕಲಾಕೃತಿ ರಚನೆ ಮಾಡುತ್ತಾರೆ.
ಉಚಿತ ಸೇವೆ: ಈ ಬಾರಿ ಸುಮಾರು 19 ಬಿಂಬ ಕಲಾಕೃತಿ ರಚಿಸಿ ಉಡುಪಿ ಸಮೀಪದ ಉದ್ಯಾವರ ವೀರ ವಿಠಲ ದೇವಸ್ಥಾನ, ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ತೆಂಕಪೇಟೆಯ ಆಚಾರ್ಯ ಮಠ, ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಹಾಗೂ ಹಿರಿಯ ಮನೆತನದ ದೇವರ ಪೂಜೆಗೆ ಉಚಿತವಾಗಿ ನೀಡಿದ್ದಾರೆ.
ಇತರರಿಗೂ ತರಬೇತಿ: ಬಹು ಅಪರೂಪದ ಈ ಕಲಾಕೃತಿ ರಚನಾ ಕಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯವನ್ನು ಹೊಂದಿರುವ ಕಾಶೀನಾಥ್ ಭಟ್ ಇವರು, ತಮ್ಮ ಜೊತೆಯಲ್ಲಿ ಸಹಕರಿಸುವ ಪತ್ನಿ, ಪುತ್ರರು, ಸೊಸೆಯಂದಿರು, ಅರ್ಚಕರಿಗೂ ತರಬೇತಿ ನೀಡಿದ್ದಾರೆ.