ಉಡುಪಿ, ಸೆ.25: ಜಿಲ್ಲೆಯ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಉದ್ಯೋಗ ಪಡೆಯಲು ಆನ್‌ಲೈನ್ ಸ್ಪರ್ಧಾತ್ಮಕ ತರಬೇತಿಯನ್ನು ಆರಂಭಿಸಿದ್ದು, ಇದರ ಲಾಭ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ತಿಳಿಸಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿಯ ನೋಂದಣಿಗಾಗಿ ಸಿದ್ಧಪಡಿಸಲಾದ ಮೊಬೈಲ್ ಆಪ್‌ಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಹಾಗೂ ತರಬೇತಿ ನಿರತ ಅಧಿಕಾರಿಗಳು ಇದ್ದು, ಅವರುಗಳು ತಮ್ಮ ಅನುಭವಗಳನ್ನು ಆನ್‌ಲೈನ್ ಮೂಲಕ ಹಂಚಿಕೊಳ್ಳಲಿದ್ದಾರೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ತರಬೇತಿಯನ್ನು ಪಡೆದು ಸ್ಪರ್ಧಾ ಪರೀಕ್ಷೆಗಳನ್ನು ನಿರಾಸಾದಾಯಕವಾಗಿ ಎದುರಿಸಬೇಕು ಎಂದರು. ಕಲಿಯಬೇಕು ಎಂಬ ಬಯಕೆ ಇರುವ ಮಕ್ಕಳು ಆಪ್ ಮೂಲಕ ಈ ತರಬೇತಿ ಹೊಂದಲು ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದ ಅವರು, ಬುದ್ದಿವಂತ ಜಿಲ್ಲೆ ಉಡುಪಿಯಲ್ಲಿ ಹೆಚ್ಚು ಜನರು ಅಧಿಕಾರಿಗಳಾಗಬೇಕು ಎಂದರು. ಸಂಜೆಯ 5.30 ರ ನಂತರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಆನ್‌ಲೈನ್ ಕ್ಲಾಸ್‌ಗಳು ನಡೆಯಲಿವೆ. ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದರು. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು.