ಉಡುಪಿ, ಸೆ.22: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಸಲು ಇಚ್ಛಿಸುವ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದ್ದು, ತರಕಾರಿ ಹಾಗೂ ಹೂವಿನ ಬೆಳೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಗರಿಷ್ಟ 5 ಹೆ. ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಗರಿಷ್ಟ 2 ಹೆ. ವರೆಗೆ ಹನಿ/ತುಂತುರು ನೀರಾವರಿ ಅಳವಡಿಸಿಕೊಳ್ಳಲು ಈ ಕೆಳಗಿನಂತೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ 2 ಹೆ. ಪ್ರದೇಶದ ವರೆಗೆ ಶೇ. 90 ಹಾಗೂ 2 ಹೆ. ಮೇಲ್ಪಟ್ಟು 5 ಹೆ. ವರೆಗೆ ಶೇ. 45 ಸಹಾಯಧನ ಮತ್ತು ಇತರೆ ರೈತರಿಗೆ 2 ಹೆ. ಪ್ರದೇಶದ ವರೆಗೆ ಶೇ. 75 ಹಾಗೂ 2 ಹೆ. ಮೇಲ್ಪಟ್ಟು 5 ಹೆ. ವರೆಗೆ ಶೇ. 45 ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡಿರುವ ಕಂಪೆನಿಗಳಿಂದ ಮಾತ್ರ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಈ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಸಮರ್ಪಕ ಬಳಕೆಯೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ರೈತರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ. ಆಸಕ್ತ ರೈತರು ಅರ್ಜಿ, ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ವಿವರ, ಜಾತಿ ಪ್ರಮಾಣ ಪತ್ರ, ಜಮೀನಿನ ನಕ್ಷೆ, ಚೆಕ್‌ಬಂದಿ, ಬೆಳೆ ದೃಡೀಕರಣ ಪತ್ರ ಹಾಗೂ ಹನಿ/ತುಂತುರು ನೀರಾವರಿ ಅಳವಡಿಸುವ ಕಂಪನಿಯ ವಿವರದೊಂದಿಗೆ ಇಲಾಖೆಯ ತಾಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ದೂ.ಸಂಖ್ಯೆ: 0820-2531950 ಅಥವಾ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ದೂ.ಸಂಖ್ಯೆ: 0820-2522837, ಕುಂದಾಪುರ ದೂ.ಸಂಖ್ಯೆ: 08254-230813 ಹಾಗೂ ಕಾರ್ಕಳ ದೂ.ಸಂಖ್ಯೆ: 08258-230288 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.