ಉಡುಪಿ, ಆ. 14: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ., ಸಿ.ಎಸ್., ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ನ ಇಪ್ಪತ್ತೈದು ವರ್ಷ ಪೂರೈಸಿದ ದಿನವನ್ನು ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನ ಮೂರೂ ಕೇಂದ್ರಗಳಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಅವರು ತ್ರಿಶಾ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಹಲವಾರು ಸವಾಲು ಹಾಗೂ ಅಡೆತಡೆಗಳನ್ನು ಎದುರಿಸಿಕೊಂಡು ಬಂದು ಇಪ್ಪತ್ತೈದು ವರ್ಷ ಪೂರೈಸುವ ಸಾಧನೆಯನ್ನು ಮಾಡಿದೆ. ಸಮಾಜಕ್ಕೆ ಕೇವಲ ಉತ್ತಮ ಸಿ.ಎ., ಸಿ.ಎಸ್., ಗಳನ್ನು ಕೊಡುವುದಲ್ಲದೆ ಒಳ್ಳೆಯ ಪ್ರಜೆಗಳನ್ನು ಕೊಡಬೇಕು ಎನ್ನುವುದು ಸಂಸ್ಥೆಯ ಆಶಯ. ಈ ಪ್ರಯಾಣದಲ್ಲಿ ಬೆಂಬಲ ನೀಡಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ವೇಳೆ ತ್ರಿಶಾ ವಿದ್ಯಾ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ಬಿಡುಗಡೆಗೊಳ್ಳಲಿರುವ ಆಲ್ಬಮ್ ಸಾಂಗ್ ನ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು ಹಾಗೂ ಇಪ್ಪತ್ತೈದು ವರ್ಷದ ಸಂಭ್ರಮಾಚರಣೆಯ ವರ್ಷದಲ್ಲಿ ಸಮಾಜಕ್ಕೆ ಉಪಯೋಗವಾಗುವ ಇಪ್ಪತ್ತೈದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಜಾರಿಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಷನ್ ನ ಟ್ರಸ್ಟಿಗಳಾದ ನಮಿತಾ ಜಿ. ಭಟ್, ರಾಮ್ ಪ್ರಭು, ತ್ರಿಶಾ ವಿದ್ಯಾ ಕಾಲೇಜು, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಪಿ.ಯು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿ ವಂದಿಸಿದರು.