ಮಲ್ಪೆ, ಆ. 14: ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ ಭಾನುವಾರ ಶ್ರೀ ಶಂಕರನಾರಾಯಣ ದೇವಳದ ಸಭಾಂಗಣದಲ್ಲಿ ನಡೆಯಿತು..
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸಾಧು ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಶಾಲಾ ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯ ಅನಾವರಣಕ್ಕೆ ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಉತ್ತೇಜನಕಾರಿಯಾಗಿದ್ದು, ಇಲ್ಲಿಯ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಸಬಲ್ಲದು ಎಂದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ದೇವಾಡಿಗ, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಸಲಹೆಗಾರ ರಮೇಶ್ ಅಮೀನ್ ಉಪಸ್ಥಿತರಿದ್ದರು.
ಕಳೆದ 20 ವರ್ಷಗಳಿಂದ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಹಕರಿಸುತ್ತಿರುವ ಹಿರಿಯ ಚಿತ್ರ ಕಲಾವಿದ ತಾರನಾಥ ತೊಟ್ಟಾಂ ಇವರನ್ನು ಗೌರವಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಚಂದ್ರಾವತಿ ಕಾನಂಗಿ ಮಹಿಳೆಯರ ರಂಗವಲ್ಲಿ ಸ್ಪರ್ಧೆಗೆ ಚಾಲನೆ ನೀಡಿದರು. ಸತೀಶ್ ಕೊಡವೂರು ಸ್ವಾಗತಿಸಿ, ನಿರೂಪಿಸಿದರು.