ಕುಂದಾಪುರ, ಜು. 22: ಕುಂದಾಪುರ ವಿಧಾನಸಭಾ ವ್ಯಾಪ್ತಿಯ 9 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣವನ್ನು ಆರಂಭಿಸುವ ಬಗ್ಗೆ ಶಾಸಕ ಕಿರಣ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಶನಿವಾರ ಶಾಸಕರ ಕಛೇರಿಯಲ್ಲಿ ಸಮಾಲೋಚನ ಸಭೆ ನಡೆಯಿತು. ಸರಕಾರಿ ಪ್ರೌಢಶಾಲೆಗಳಾದ ಕುಂದಾಪುರ, ಕೋಟೇಶ್ವರ, ಕೋಡಿಕನ್ಯಾನ, ಮಣೂರು, ಗುಂಡ್ಮಿ, ತೆಕ್ಕಟ್ಟೆ, ಬೀಜಾಡಿ, ಬಸ್ರೂರು ಹಾಗೂ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಕೋಟೇಶ್ವರ ಇಲ್ಲಿ ಈ ಬಾರಿ ಯಕ್ಷಗಾನ ತರಬೇತಿಯನ್ನು ಆರಂಭಿಸಿ ಡಿಸೆಂಬರ್ ತಿಂಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುವುದೆಂದು ತೀರ್ಮಾನಿಸಲಾಯಿತು.
ಶಾಸಕ ಕಿರಣ್ ಕೊಡ್ಗಿಯವರು ಮಾತನಾಡಿ ಈ ಬಾರಿ ಕುಂದಾಪುರದ ಯಕ್ಷಶಿಕ್ಷಣವನ್ನು ಯಶಸ್ವಿಗೊಳಿಸುವ. ಡಿಸೆಂಬರ್ ತಿಂಗಳಲ್ಲಿ ಆಯೋಜಿಸುವ ಪ್ರದರ್ಶನದ ಒಟ್ಟು ವ್ಯವಸ್ಥೆಯ ಬಗ್ಗೆ ಮುಂದೆ ನಿರ್ಧರಿಸೋಣ. ಅವಕಾಶ ಕಲ್ಪಿಸಿದ ಯಕ್ಷಶಿಕ್ಷಣದ ಎಲ್ಲ ಪದಾಧಿಕಾರಿಗಳಿಗೆ ನಾವು ಆಭಾರಿಗಳು ಎಂದರು. ಯಕ್ಷಶಿಕ್ಷಣದ ರೂಪುರೇಷೆಗಳ ಸಮಗ್ರ ಮಾಹಿತಿಯನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನೀಡಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಕುಂದಾಪುರಕ್ಕೂ ವಿಸ್ತರಣೆಗೊಂಡದ್ದು ಸಂತಸದ ವಿಚಾರ ಎಂದರು. ಗುರುಗಳಾದ ಪ್ರಸಾದ್ ಮೊಗೆಬೆಟ್ಟು, ನರಸಿಂಹ ತುಂಗ, ಮಂಜುನಾಥ ಕುಲಾಲ, ವಿಷ್ಣುಮೂರ್ತಿ ಬೇಳೂರು, ನವೀನ ಕೋಟ ಹಾಗೂ ದೇವದಾಸ ಮರವಂತೆ, ರಾಹುಲ್ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ ಹಾಗೂ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.