ಉಡುಪಿ, ಜೂನ್ 16: ಡಾ. ಉಪ್ಪಂಗಳ ರಾಮ ಭಟ್ಟ, ಶ್ರೀಮತಿ ಶಂಕರಿ ಅವರ ದತ್ತಿನಿಧಿಯಿಂದ ನೀಡುವ ‘ಅಕಲಂಕ ಪ್ರಶಸ್ತಿ’ಗೆ ಡಾ.ಕೆ. ಎಸ್ ಪವಿತ್ರ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25,000 ನಗದು ಪುರಸ್ಕಾರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜುಲೈ 2 ರಂದು ಸಂಜೆ 4 ಗಂಟೆಗೆ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ದತ್ತಿ ದಾನಿಗಳಾದ ಶಂಕರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಕೆ.ಎಸ್. ಪವಿತ್ರ ಪರಿಶ್ರಮ -ಪ್ರತಿಭೆಗಳೆರಡರ ವಿಸ್ಮಯಕರ ವ್ಯಕ್ತಿತ್ವದ ಡಾ. ಕೆ.ಎಸ್. ಪವಿತ್ರ ವಿಜ್ಞಾನ-ಕಲೆಗಳಲ್ಲಿ ಸಮಾನ ಎನ್ನುವ ಸಾಧನೆಗೈದಿರುವವರು. ಪಿ.ಯು.ಸಿ. ವಿಜ್ಞಾನದಲ್ಲಿ ಶೇಕಡ 98 ಅಂಕಗಳೊಂದಿಗೆ, 17ರ ಎಳೆ ವಯಸ್ಸಿನಲ್ಲಿ ವಿದ್ವತ್ ಭರತನಾಟ್ಯವನ್ನು ರಾಜ್ಯಕ್ಕೆ 2ನೇ ರ‍್ಯಾಂಕ್‌ನೊಂದಿಗೆ ಗಳಿಸಿದ ಅಗಾಧ ಪ್ರತಿಭೆ ಅವರದ್ದು. ರಾಜ್ಯದ ಅತ್ಯಂತ ಹಳೆಯ, ಪ್ರತಿಷ್ಠಿತ ಸಂಸ್ಥೆಯಾದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ, ಅಂತರರಾಷ್ಟ್ರೀಯ ಖ್ಯಾತಿಯ ನಿಮ್ಹಾನ್ಸ್ ನಿಂದ ಎಂ.ಡಿ. ಮನೋವೈದ್ಯಕೀಯ ಪದವಿ, ಮನೋವೈದ್ಯಕೀಯ ಕ್ಷೇತ್ರದಲ್ಲಿ ಹತ್ತು ಹಲವು ಪದವಿ- ಪುರಸ್ಕಾರ-ಫೆಲೋಷಿಪ್‌ಗಳು ಇವರ ಬೌದ್ಧಿಕ ಸಾಮರ್ಥ್ಯದ ನಿದರ್ಶನಗಳು, ಖ್ಯಾತ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ಬಳಿ 20 ವರ್ಷಗಳ ದೀರ್ಘ ಅಧ್ಯಯನ. ನಂತರ ನೃತ್ಯ
ಕ್ಷೇತ್ರದಲ್ಲಿ ಕಲಾವಿದೆ-ನೃತ್ಯ ಸಂಯೋಜಕಿ- ಗುರು- ಆಯೋಜಕಿ-ಸಂಶೋಧಕಿ ಹೀಗೆ ಹಲವು ಪಾತ್ರಗಳಲ್ಲಿ ಡಾ. ಪವಿತ್ರ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿದವರು.
ಶ್ರೀ ವಿಜಯ ಕಲಾನಿಕೇತನ ಅವರು ಸ್ಥಾಪಿಸಿ, ಬೆಳೆಸಿದ ಸಂಸ್ಥೆ. ಅದರ ಕಾರ್ಯಗಳ ಮೂಲಕ ಡಾ. ಪವಿತ್ರ ತನ್ನೆರಡು ವೃತ್ತಿಗಳಾದ ಮನೋವೈದ್ಯಕೀಯ-ನೃತ್ಯಗಳನ್ನು ಬೆಸೆದರು. ಮನೋವೈದ್ಯಕೀಯ-ನೃತ್ಯ ಕ್ಷೇತ್ರಗಳ ಬಗೆಗೆ ಅರಿವನ್ನು ಪಸರಿಸುವ ಸಲುವಾಗಿ ಡಾ. ಪವಿತ್ರಾ ಸಾಹಿತ್ಯ ಕ್ಷೇತ್ರವನ್ನೂ ಪ್ರವೇಶಿಸಿದರು. ಸಾಹಿತ್ಯ ಪ್ರೀತಿ ಬಾಲ್ಯದಿಂದ ಇದ್ದರೂ, ಅದರ ಗಂಭೀರ ಕೃಷಿ ಮಾಡುವ ಸಲುವಾಗಿ ಪವಿತ್ರ ಎಂ.ಎ. (ಕನ್ನಡ ಸಾಹಿತ್ಯ), ಎಂ.ಎ. (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಗಳನ್ನು ಅಭ್ಯಸಿಸಿದರು. ಎರಡರಲ್ಲೂ ರ‍್ಯಾಂಕ್ ಬಂಗಾರದ ಪದಕ ಗಳಿಸಿದರು. ಪ್ರಸ್ತುತ ತಾವು ಪ್ರತಿನಿತ್ಯ ನೋಡುವ ರೋಗಿಗಳು, ಈವರೆಗೆ ಬರೆದಿರುವ 56 ಪುಸ್ತಕಗಳು, ಮತ್ತು ಕಾರ್ಯಕ್ರಮ -ತರಬೇತಿ-ಪ್ರಾತ್ಯಕ್ಷಿಕೆ- ಸಂಶೋಧನೆಗಳಿಂದ ಮನೋವೈದ್ಯಕೀಯ-ನೃತ್ಯ- ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಶ್ರೇಷ್ಠ ವೈದ್ಯ ಸಾಹಿತಿ ರಾಜ್ಯ ಪ್ರಶಸ್ತಿ, ಕಲಾ ಸಂದೇಶ ಪ್ರಶಸ್ತಿ, ಮಕ್ಕಳ ಕಲ್ಯಾಣಕ್ಕಾಗಿ ಅವರು ಸಲ್ಲಿಸಿದ ಸೇವೆಗಾಗಿ ರಾಜ್ಯ ಪ್ರಶಸ್ತಿ, ಡಾ. ಎಂ. ವೈದ್ಯಲಿಂಗಂ ಉಪನ್ಯಾಸ ಗೌರವ, ಯುನಿಸೆಫ್ ಮೀಡಿಯಾ ಪ್ರಶಸ್ತಿ ಇವೇ ಮೊದಲಾದ ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಕನ್ನಡ ಕಾವ್ಯಗಳನ್ನು ಆಧರಿಸಿದ ಅವರ ನೃತ್ಯ ಪ್ರಾತ್ಯಕ್ಷಿಕೆಗಳು ನಾಡಿನೆಲ್ಲೆಡೆ ಪ್ರದರ್ಶನಗೊಂಡಿವೆ.