ಬ್ರಹ್ಮಾವರ, ಜೂನ್ 16: ಯುವಜನರು ಈಗಾಗಲೇ ಉದ್ಯಮದಲ್ಲಿ ಯಶಸ್ಸು ಪಡೆದವರ ಅನುಭವವನ್ನು ತಿಳಿದುಕೊಂಡು ಮುಂದುವರೆದರೆ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ವ್ಯವಹಾರ ಮಾಡುವ ವ್ಯಕ್ತಿಗೆ ಆತ್ಮವಿಶ್ವಾಸವಿರಬೇಕು ಎಂದು ಕೆನರಾ ಬ್ಯಾಂಕ್ ನ ಸಿ.ಐ.ಬಿ.ಎಂ ಸಹಾಯಕ ಮಹಾಪ್ರಬಂಧಕರಾದ ಹೇಮಂತ್ ಸಿಂಗ್ ಅಭಿಪ್ರಾಯಪಟ್ಟರು. ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ ಕೋಳಿ ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಇಂದಿನ ಯುವಕರಿಗೆ ರುಡ್ ಸೆಟ್ ಸಂಸ್ಥೆಯನ್ನು ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಒಂದು ಒಳ್ಳೆಯ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು. ಅತಿಥಿಗಳಾಗಿ ವೇದಿಕೆಯಲ್ಲಿದ್ದ ಮಧ್ವನಗರ ಸುಜಯ ಫೀಡ್ಸ್ ಸಂಸ್ಥೆಯ ಮಾಲಕರಾದ ಸಂಜಯ್ ನಾಯಕ್ ಮಾತನಾಡಿ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯಮದಲ್ಲಿ ಹಂತ ಹಂತವಾಗಿ ಮುಂದುವರೆದರೆ ಒಳ್ಳೆಯ ಅನುಭವ ಸಿಗುತ್ತದೆ ಎಂದರು. ಕಠಿಣ ಪ್ರಯತ್ನಗಳಿಂದ ಸ್ವಂತ ಉದ್ದಿಮೆ ಆರಂಭಿಸಿ, ಬ್ಯಾಂಕಿನ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಕ್ಷ್ಮೀಶ ಎ.ಜಿ ಮಾತನಾಡುತ್ತಾ, ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಆರಂಭ ಮಾಡಿ ಹಂತ ಹಂತವಾಗಿ ಬೆಳೆಯಿರಿ. ಸವಾಲುಗಳು ಬಂದರೆ ರುಡ್ ಸೆಟ್ ಸಂಸ್ಥೆಯನ್ನು ಸಂಪರ್ಕ ಮಾಡಿ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಕುರಿತು ಮಾತನಾಡಿದರು. ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸಯ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರಾರ್ಥಿಗಳಾದ ಜೇಮ್ಸ್, ಮಹಮ್ಮದ್ ಇರ್ಷಾದ್, ಅನುಭವ ಹಂಚಿಕೊಂಡರು. ಅರುಣ ಕುಮಾರ್ ಪ್ರಾರ್ಥನೆ ನೆರವೇರಿಸಿದರು.