ಬೆಳ್ಮಣ್, ಏ. 18: ಸ್ವಚ್ಛತೆ ಎಂಬುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ನಮ್ಮ ಮನೆ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಸ್ವಚ್ಛತೆಯ ಪಾಠ ಹೇಳಿದ ಗಾಂಧೀಜಿಯವರ ತತ್ವಗಳಿಗೆ ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ನಮ್ಮ ಹಳ್ಳಿ, ಗ್ರಾಮ, ದೇಶ ಸ್ವಚ್ಛಗೊಳಿಸಲು ಸಾಧ್ಯ. ನಮ್ಮ ಸ್ವಚ್ಛತಾ ಅಭಿಯಾನಕ್ಕೆ ಊರಿನ ಜನತೆ ಸಹಕಾರ ನೀಡಿದಲ್ಲಿ ಖಂಡಿತವಾಗಿಯೂ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.
ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು ಇದರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಬ್ಬನಡ್ಕದಿಂದ ಮಂಜರಪಲ್ಕೆವರೆಗಿನ ಸುಮಾರು 1.5 ಕಿ.ಮೀ. ರಸ್ತೆಯ ಎರಡು ಇಕ್ಕೆಲಗಳಲ್ಲಿದ್ದ ಕಸಕಡ್ಡಿ, ಪ್ಲಾಸ್ಟಿಕ್, ಪೇಪರ್, ಬಾಟಲಿ, ಬಟ್ಟೆ ಸೇರಿದಂತೆ ೧೫ ಚೀಲ ತ್ಯಾಜ್ಯಗಳನ್ನು ಸ್ವಚ್ಛತಾ ಅಭಿಯಾನದ ಮೂಲಕ ಸಂಗ್ರಹಿಸಿ ನಂದಳಿಕೆ ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಅಬ್ಬನಡ್ಕ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಸುರೇಶ್ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಉದಯ ಅಂಚನ್, ಉಪಾಧ್ಯಕ್ಷೆ ಲೀಲಾ ಪೂಜಾರಿ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಸಂಧ್ಯಾ ಶೆಟ್ಟಿ, ಆರತಿ ಕುಮಾರಿ, ಕೀರ್ತನ್ ಕುಮಾರ್, ಹರೀಶ್ ಪೂಜಾರಿ, ಸುಲೋಚನಾ ಕೋಟ್ಯಾನ್, ಪುಷ್ಪ ಕುಲಾಲ್, ವೀಣಾ ಪೂಜಾರಿ, ಯಶವಂತ್ ಕುಲಾಲ್ ಮೊದಲಾದವರಿದ್ದರು.