ಕೊಡವೂರು, ಏ. 12: ಕೊಡವೂರು ವಾರ್ಡಿನ ಹೊಸ ರಸ್ತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಗಿರುವ ಡಾ. ಕೇಶವ ಬಲಿರಾಮ ಡಾ. ಹೆಡ್ಗೆವಾರ್ ಹೆಸರನ್ನು ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಮಹಾನ್ ವ್ಯಕ್ತಿಯ ಹೆಸರನ್ನು ಕೊಡವೂರು ವಾರ್ಡಿನಲ್ಲಿ ಹೊಸ ರಸ್ತೆಗೆ ನಾಮಕರಣ ಮಾಡುವ ಮುಖಾಂತರ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕಾರ್ಯ ಮಾಡಿದ್ದೇವೆ. ದೇಶ ಭಕ್ತಿಯನ್ನು ಹುಟ್ಟಿಸಬೇಕು ಎನ್ನುವ ದೃಷ್ಟಿಯಿಂದ ಡಾ. ಹೆಡ್ಗೆವಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಿ ಮಕ್ಕಳಿಂದಲೇ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ನಾಗಪುರದಲ್ಲಿ ಪ್ರಾರಂಭ ಮಾಡಿದರು. ಅಂತಹ ಮಹಾನ್ ವ್ಯಕ್ತಿಯನ್ನು ನಾವೂ ನಿತ್ಯ ಸ್ಮರಣೆ ಮಾಡಬೇಕು ಮತ್ತು ಅವರು ನಡೆದ ದಾರಿಯಲ್ಲಿ ನಡೆಯುವಂತಹ ಅವಶ್ಯಕತೆ ಇದೆ. ಇವರ ಹೆಸರನ್ನು ಮುಂದಿನ ಪೀಳಿಗೆಗೆ ಮತ್ತು ನಿತ್ಯ ನೆನಪು ಮಾಡುವ ನಿಟ್ಟಿನಲ್ಲಿ ಅವರ ಜನ್ಮ ದಿನದ ಅಂಗವಾಗಿ ನಾಮಕರಣ ಮಾಡಲಾಗಿದೆ ಎಂದು ವಿಜಯ್ ಕೊಡವೂರು ತಿಳಿಸಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರ್ಗ, ರಾಣಾ ಪ್ರತಾಪ್ ಸಿಂಗ್, ವೀರ ಸಾವರ್ಕರ್ ಮಾರ್ಗ, ವಿವೇಕಾನಂದ ಮಾರ್ಗ ಹೀಗೆ ಈ ದೇಶದ ಶಕ್ತಿಗಳಾಗಿರುವ ಮಹಾನ್ ವ್ಯಕ್ತಿಗಳ ಹೆಸರನ್ನು ಇಲ್ಲಿಯ ರಸ್ತೆಗಳಿಗೆ ಇಡಲಾಗಿದೆ.
ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಸ್ಥಳೀಯರಾದ ವಿನಯ್ ಪಡುಕರೆ, ರಾಮಪ್ಪ ಮೆಂಡನ್, ರಾಜೀವ್ ಸುವರ್ಣ, ಪ್ರಭಾಕರ್ ಜತ್ತನ್, ಚಂದ್ರಕಾಂತ್ ಮುಂತಾದವರಿದ್ದರು.