ಮಣಿಪಾಲ, ಏ. 5: ಸಮಾಜವು ಕಲೆ ಮತ್ತು ಕಲಾವಿದರನ್ನು ಬೆಂಬಲಿಸಿದರೆ ಮಾತ್ರ ಕಲೆ ಉಳಿಯುತ್ತದೆ. ಉತ್ತಮ ಕಲೆಯ ರಚನೆಗೆ ಕಲಾಕಾರರ ಸಂಪೂರ್ಣ ಸಮರ್ಪಣೆ ಬೇಕು ಮತ್ತು ಅದರಲ್ಲಿ ಸಂತೋಷವೂ ಅಡಕವಾಗಿದೆ ಎಂದು ಒಡಿಶಾದ ಪಟ್ಟಚಿತ್ರ ಕಲಾವಿದೆ ಗೀತಾಂಜಲಿ ದಾಸ್ ನುಡಿದರು. ಪಟ್ಟಚಿತ್ರ ಕಾರ್ಯಾಗಾರವನ್ನು ನಡೆಸಲು ಉಡುಪಿಗೆ ಬಂದಿದ್ದ ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು.
ಗೀತಾಂಜಲಿ ದಾಸ್ ಅವರು ಪಟ್ಟಚಿತ್ರ ಕಲಾ ಪ್ರಕಾರದ ವಿಶೇಷತೆಗಳು, ಅದಕ್ಕೆ ಬಳಸುವ ಮೂಲ ವಸ್ತು, ವಿಷಯ, ತಂತ್ರ ಇತ್ಯಾದಿಗಳನ್ನು ವಿವರಿಸಿದರು. ಅವರು ರಚಿಸಿದ ಶ್ರೀ ಕೃಷ್ಣನ ಜೀವನ ಮತ್ತು ಇತರ ದೇವ ಮತ್ತು ದೇವತೆಗಳ ವಿಷಯಗಳನ್ನು ಒಳಗೊಂಡಿರುವ ವರ್ಣಚಿತ್ರಗಳನ್ನು ಪ್ರದರ್ಶಿಸಲಾಯಿತು. ಒಡಿಶಾದ (ಜಗನ್ನಾಥ) ಪುರಿ ಪ್ರದೇಶದಲ್ಲಿ ಈ ಕಲೆ ಬಹು ಪ್ರಚಲಿತವಾಗಿದೆ. ಈ ಸಂವಾದವನ್ನು ಜಿಸಿಪಿಎಎಸ್ ಮತ್ತು ಭಾವನಾ ಫೌಂಡೇಶನ್ ಆಯೋಜಿಸಿತ್ತು. ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಡಾ. ಜನಾರ್ದನ ರಾವ್ ಹಾವಂಜೆ ಸಂವಾದವನ್ನು ನಡೆಸಿಕೊಟ್ಟರು.