ಉಡುಪಿ, ಮಾ.19: ಇಂದಿನ ಭ್ರಷ್ಟ ರಾಜಕೀಯ ಪರಿಸ್ಥಿತಿಗೆ ಸಮಾಜವೇ ಕಾರಣ. ಸಮಾಜದ ಭಾವನೆ ಬದಲಾಯಿಸದಿದ್ದರೆ ದೇಶಕ್ಕೆ ವಿಪತ್ತು ಎದುರಾಗಲಿದೆ. ಆದುದರಿಂದ ಭ್ರಷ್ಟಾಚಾರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದೇ ಪತ್ರಕರ್ತ ಮಾಡಬಹುದಾದ ಬಹುದೊಡ್ಡ ದೇಶ ಸೇವೆಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಉದ್ದನೆಯ ಪೆನ್ನಿನ ಕ್ಯಾಪ್ ತೆಗೆದು ಪತ್ರಕರ್ತರಿಗೆ ಹಸ್ತಾಂತರಿಸುವ ಮೂಲಕ ಭ್ರಷ್ಟಾಚಾರದ ವಿರೋಧಿ ಆಂಧೋಲನದಲ್ಲಿ ಪತ್ರಕರ್ತರ ಸಮುದಾಯ ಮುಂದುವರೆಯುವಂತೆ ಸಂದೇಶ ನೀಡುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಜನಪ್ರತಿನಿಧಿಗಳಿಗೆ ಅರ್ಥೈಸಬೇಕು. ಸಂವಿಧಾನದಲ್ಲಿ ಮೂರು ಅಂಗಗಳ ಜೊತೆ ಮಾಧ್ಯಮವನ್ನು ಜನರೇ ನಾಲ್ಕನೇ ಅಂಗ ಎಂದು ಪರಿಗಣಿಸಿ ಜವಾಬ್ದಾರಿ ಕೊಟ್ಟಿದ್ದಾರೆ. ಶ್ರೀಮಂತಿಕೆಯಿಂದ ಮಾತ್ರ ಅಧಿಕಾರ ಸಿಗುತ್ತದೆ ಎಂಬ ಭಾವನೆ ಸಮಾಜದಲ್ಲಿದೆ. ಸಮಾಜದ ಈ ಭಾವನೆ ಬದಲಾಯಿಸಲು ಮಾಧ್ಯಮದಿಂದ ಮಾತ್ರ ಸಾಧ್ಯ ಎಂದರು.
ದೇಶದಲ್ಲಿ ದುರಾಸೆಯ ಅಭಿವೃದ್ಧಿಯಾಗಿದೆ. ವಿವಿಧ ಹಗರಣಗಳು ನಡೆದು ಬ್ರಹ್ಮಾಂಡ ಭ್ರಷ್ಟಾಚಾರ ವ್ಯಾಪಿಸಿದೆ. ದೇಶದ ತಿಜೋರಿಯಿಂದ ಈ ರೀತಿಯಲ್ಲಿ ಹಣ ಲೂಟಿ ಮಾಡಿದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಪ್ರಶ್ನೆ ಮಾಡಿಕೊಳ್ಳಬೇಕು. ತೃಪ್ತಿಯಿಂದ ಮಾತ್ರ ದುರಾಸೆಯನ್ನು ಮಟ್ಟ ಹಾಕಬಹುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ನೈಪುಣ್ಯತೆ ಮತ್ತು ವೃತ್ತಿಪರತೆ ಅನೇಕ ರೀತಿಯ ಒತ್ತಡಗಳಿಂದ ನಲುಗುತ್ತಿದೆ. ಪತ್ರಕರ್ತರಿಂದ ಸಮಾಜ ಇನ್ನು ಹೆಚ್ಚಿನ ನಿರೀಕ್ಷೆ ಮಾಡುತ್ತಿದೆ. ನಾವು ಆ ಭರವಸೆಯನ್ನು ಕಳೆದುಕೊಳ್ಳಬಾರದು. ವೃತ್ತಿಯಲ್ಲಿ ನಮಗೆ ಬದ್ದತೆ, ಜವಾಬ್ದಾರಿ ಇರಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಘದ ಸ್ಥಾಪಕ ಉಪಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿದರು. ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಸಂಘದ ಸ್ಥಾಪನ ಪ್ರಧಾನ ಕಾರ್ಯದರ್ಶಿ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಯಿತು. ಸ್ಥಾಪಕ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಗೌರವಿಸಲಾಯಿತು. ನೂತನ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಶಿರೂರು, ಜಿಲ್ಲಾ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ್ ಸುವರ್ಣ ವಂದಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.