ಉಡುಪಿ, ಫೆ. 20: ಉಡುಪಿ ನಗರದ ಗುಂಡಿಬೈಲು-ಅಂಬಾಗಿಲು ರಸ್ತೆಯಲ್ಲಿ ಕಾಮಗಾರಿ ನಿರ್ವಹಿಸಲು ಅಲ್ಲಲ್ಲಿ ರಸ್ತೆಯನ್ನು ಅಗೆದಿದ್ದು, ರಸ್ತೆಯನ್ನು ಯಥಾಸ್ಥಿತಿಗೆ ತರುವಲ್ಲಿ ಸಂಬಂಧಪಟ್ಟ ಇಲಾಖೆ ಮೀನ ಮೇಷ ಎನಿಸುತ್ತಿರುವುದು ಇದೀಗ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಅಗೆದಲ್ಲಿ ಕೆಲವೆಡೆ ಬ್ಯಾರಿಕೇಡ್ ಇಟ್ಟಿದ್ದು ಉಳಿದೆಡೆ ಯಾವುದೇ ಎಚ್ಚರಿಕೆಯ ಗುರುತು ಇಲ್ಲ. ಉಡುಪಿ ನಗರದಿಂದ ಕಲ್ಸಂಕ-ಗುಂಡಿಬೈಲು-ಅಂಬಾಗಿಲು-ಸಂತೆಕಟ್ಟೆಯ ಮೂಲಕ ಸಾವಿರಾರು ವಾಹನ ಸವಾರರು ದಿನನಿತ್ಯ ಸಂಚರಿಸುತ್ತಾರೆ.
ಒಳ್ಳೆಯ ಗುಣಮಟ್ಟದ ರಸ್ತೆ ನಿರ್ಮಾಣವಾದರೂ ಇದೀಗ ಇದೇ ರಸ್ತೆಯನ್ನು ಅಲ್ಲಲ್ಲಿ ಅಗೆದು ಅದನ್ನು ಯಥಾಸ್ಥಿತಿಗೆ ತರದ ಕಾರಣ ಸಾಧಾರಣ ವೇಗದಿಂದ ಬರುವ ವಾಹನ ಸವಾರರು ಪಲ್ಟಿ ಹೊಡೆದು ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿಯ ಸಮಯದಲ್ಲಿ ಇದು ಮೃತ್ಯುಕೂಪವಾಗಲಿದೆ ಎಂದರೆ ಅತಿಶಯವಾಗದು. ಸಂಬಂಧಪಟ್ಟ ಇಲಾಖೆ ಅಗೆದ ರಸ್ತೆಯನ್ನು ಮುಚ್ಚಲು ವಿಳಂಬ ನೀತಿ ಅನುಸರಿಸಿದರೆ, ಅಮಾಯಕರ ಜೀವಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದೆ.