ಕಾರ್ಕಳ, ಫೆ. 12: ಮದ್ಯವ್ಯಸನವು ದುಡಿಯುವ ವರ್ಗಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಹೇಳಿದರು. ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಾರ್ಕಳ ತಾಲೂಕು, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇದರ ಸಹಯೋಗದಲ್ಲಿ ಕಾರ್ಕಳ ಜೋಡುರಸ್ತೆಯ ರಾಜಾಪುರ ಸಾರಸ್ವತ ಸೊಸೈಟಿಯ ಆರ್. ಎಸ್. ಬಿ. ಸಭಾಭವನದಲ್ಲಿ ಭಾನುವಾರ ನಡೆದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನಾ ವ್ಯಸನಮುಕ್ತರ ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮದ್ಯವ್ಯಸನದಿಂದ ನೆಮ್ಮದಿ ಸಿಗುತ್ತದೆ ಎಂದು ಭಾವಿಸುವುದು ತಪ್ಪು. ಅದರಿಂದ ದುಷ್ಪರಿಣಾಮಗಳೆ ಹೆಚ್ಚಿದೆ. ಮದ್ಯವ್ಯಸನದ ಸಾಮಾಜಿಕ ಪಿಡುಗು ಅದನ್ನು ನಾವು ಹೊಡೆದೋಡಿಸಬೇಕು. ನಾವೇ ಸಿದ್ದರಾಗಬೇಕು ಎಂದರು. ಡಾ. ಪಿ.ವಿ ಭಂಡಾರಿಯವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅವೆಮಣ್ಣಿನ ಅಕೃತಿ ಅನಾವರಣಗೊಳಿಸಿ ಎ.ವಿ ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ ಭಂಡಾರಿ ಮಾತನಾಡಿ, ಸಮಾಜವನ್ನು ಮದ್ಯವ್ಯಸನ ಮುಕ್ತ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹತ್ತರ ಪಾತ್ರ ವಹಿಸುತ್ತದೆ. ಅದರ ಸೇವೆ ಅಭಿನಂದನೀಯ ಎಂದರು.
ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆ ಮಾತನಾಡಿ, ವ್ಯಸನಮುಕ್ತರ ಕುಟುಂಬೋತ್ಸವ ಮೂಲಕ ಮನೆಯಲ್ಲಿ ಸಂತೋಷ ಪಸರಿಸಲಿ ಎಂದು ಶುಭಹಾರೈಸಿದರು. ರಾಜಾಪುರ ಸಾರಸ್ವತ ಕ್ರೆಡಿಟ್ ಕೊ ಆಪರೇಟಿವ್ ಸಾರಸ್ವತ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿದರು. ಇದೇ ಸಂದರ್ಭದಲ್ಲಿ ಮದ್ಯವ್ಯಸನ ಕುರಿತಾದ ಶಿಕ್ಷಕರ ಕೈಪಿಡಿಯನ್ನು ಜನಜಾಗೃತಿ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಸುಭಾಷ್ ಚಂದ್ರ ಚೌಟ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್, ಉದ್ಯಮಿ ಹರಿಶ್ಚಂದ್ರ ನಾಯಕ್ ಮಾಳ, ಶ್ರೀ ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಭಾಸ್ಕರ್ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್, ಆಕೃತಿ ವಿನ್ಯಾಸಕಾರ ವೆಂಕಿ ಪಲಿಮಾರು ದಂಪತಿಗಳು, ರಾಜಾಪುರ ಸಾರಸ್ವತ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು, ಮನೋವೈದ್ಯ ಡಾ. ಪಿ.ವಿ ಭಂಡಾರಿ ಯವರನ್ನು ಸನ್ಮಾನಿಸಲಾಯಿತು.
ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು, ಮೇಲ್ವಿಚಾರಕ ಮನೋಜ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬೈಕಾಡಿಯ ಮಂದಾರ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಮದ್ಯವ್ಯನಸದ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.