ಕಾರ್ಕಳ, ಫೆ. 6: ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಬೋಳ ಹೇಳಿದರು. ಅವರು ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ಆಶ್ರಯದಲ್ಲಿ ಪ್ರಕೃತಿ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಅಂತರ್ ಜಿಲ್ಲಾ ಯುವ ಮಂಡಲಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳು ಮುನ್ನಲೆಗೆ ಬರಲು ಪ್ರೋತ್ಸಾಹವಿಲ್ಲದ ಕಾರಣ ಅವಕಾಶವಂಚಿತರಾಗಿದ್ದಾರೆ. ಇಂತಹ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಒದಗಿಸುವ ಸಾಣೂರು ಯುವಕ ಮಂಡಲದ ಕಾರ್ಯಸಾಧನೆ ರಾಜ್ಯಕ್ಕೆ ಮಾದರಿ ಎಂದರು. ಇಂತಹ ಕ್ರೀಡಾಪಟುಗಳಿಗೆ ಸರ್ಕಾರಗಳು ಹೆಚ್ಚು ಅನುದಾನಗಳನ್ನು ಕೊಡಬೇಕೆಂದು ಸಲಹೆ ನೀಡಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಲ್ಪ್ರೆಡ್ ಡಿ. ಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಾಣೂರು ಯುವಕ ಮಂಡಲದ ಪ್ರಧಾನ ಮಹಾಪೋಷಕ ಸದಸ್ಯರಾದ ರಮೇಶ್ ಶೆಟ್ಟಿ ಮುದೆಲಾಡಿ, ಸಾಣೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಜಾತಾ ಶೆಟ್ಟಿ, ಸಾಣೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಯುವರಾಜ್ ಜೈನ್, ಪ್ರಕೃತಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷರಾದ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ತ ಉಪಸ್ಥಿತರಿದ್ದರು.
ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ವಂದಿಸಿದರು. ಜಿಲ್ಲೆಯ 22 ಸಂಘಗಳಿಂದ ಸುಮಾರು 130 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.