ಕೋಟ, ಜ.30: ನಾವಾಡುವ ಭಾಷೆಗಳು ನಮ್ಮ ಪ್ರಾದೇಶಿಕ ಸಂಸ್ಕೃತಿಯ ಭಾಗವೇ ಆಗಿರುತ್ತದೆ. ಭಾಷೆಯ ಬಗ್ಗೆ ಕೀಳರಿಮೆ ತೋರಿಸದೆ ಉಪಯೋಗಿಸಿದಷ್ಟು ಸಮೃದ್ಧವಾಗಿ ಭಾಷೆಯ ಬೆಳವಣಿಗೆ ಸಾಧ್ಯ. ಕುಂದಾಪ್ರ ಭಾಷೆಗೆ ತನ್ನದೇ ಸ್ಥಾನಮಾನ ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಖ್ಯಾತಿ ಹೊಂದಿರುವುದು ಹೆಮ್ಮೆಯ ವಿಷಯ ಎಂದು ಹಾಸ್ಯ ಕಲಾವಿದ, ರಂಗಕರ್ಮಿ ನಾಗರಾಜ್ ತೆಕ್ಕಟ್ಟೆ ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಇವರ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣ, ದತ್ತಿ ಪುರಸ್ಕಾರ, ನಾಟಕ ಪ್ರದರ್ಶನ ಆಹ್ಲಾದ- 2023 (ಸಂತಸದ ಕರೆಗಾಳಿ) ಕಾರ್ಯಕ್ರಮದಲ್ಲಿ ದಿ. ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಇಬ್ರಾಹೀಂ ಸಾಬೇಬ್ ಕೋಟ ಅವರು ಮಾತನಾಡುತ್ತಾ, ಸಾಂಸ್ಕೃತಿಕ -ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕಾರಂತ ಥೀಮ್ ಪಾರ್ಕ್ ದತ್ತಿ ಪುರಸ್ಕಾರದ ಮೂಲಕ ಸಾಧಕರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.
ಸಾಂಸ್ಕೃತಿಕ ಚಿಂತಕ ಪ್ರಭಾಕರ್ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನ (ರಿ) ಕೋಟ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ರಂಗಕರ್ಮಿ ಬಿ.ಎಸ್ ರಾಮ್ ಶೆಟ್ಟಿ ಹಾರಾಡಿ ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಉಡುಪಿ ಜಿಲ್ಲಾ ಶಿಕ್ಷಕರ ಬಳಗ ಅಭಿನಯಿಸಿರುವ ರಾಷ್ಟ್ರೀಯ ಮಟ್ಟದ ತೃತೀಯ ಸ್ಥಾನ ಪಡೆದ ನಾಟಕ ಬರ್ಬರಿಕ ನಾಟಕ ಪ್ರದರ್ಶನಗೊಂಡಿತು.